ಜಮ್ಮು (PTI) ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಸಾಂಬಾ, ಜಮ್ಮು ಮತ್ತು ಪೂಂಛ್‌ನಲ್ಲಿ ಸೇನೆ ಮತ್ತು ಬಿಎಸ್‌ಎಫ್ ಪಡೆಯ ಯೋಧರು ಪಾಕಿಸ್ತಾನದ ಸೇನೆಯ ಯೋಧರು ಪರಸ್ಪರ ಸಿಹಿ ಹಂಚಿ, ಸಂಭ್ರಮಿಸಿದರು.
'ಪೂಂಛ್‌ನ ಚಕನ್ ದಾ ಬಾಗ್‌ನಲ್ಲಿನ ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್‌ಒಸಿ) ಮತ್ತು ಇನ್ನೊಂದು ಪ್ರದೇಶದಲ್ಲಿ ಭಾರತ ಮತ್ತು ಪಾಕಿಸ್ತಾನ ಸೇನೆಯ ಯೋಧರು ಸಿಹಿ ವಿನಿಮಯ ಮಾಡಿಕೊಂಡರು' ಎಂದು ಅಧಿಕಾರಿಗಳು ತಿಳಿಸಿದ್ದಾರೆ.
'ಸಾಂಬಾ, ಕಥುವಾ, ಆರ್.ಎಸ್. ಪುರ ಹಾಗೂ ಅಂಖೂರ್‌ನ ಎಲ್ಲ ಗಡಿ ಹೊರಠಾಣೆಗಳಲ್ಲಿ ಉಭಯ ದೇಶದ ಸೈನಿಕರು ಪರಸ್ಪರ ಶುಭ ಕೋರಿ, ಸಿಹಿ ಹಂಚಿದ್ದಾರೆ' ಎಂದೂ ಅವರು ಮಾಹಿತಿ ನೀಡಿದರು.
ಯೋಧರಿಂದ ಸ್ವಾತಂತ್ರ್ಯ ದಿನಾಚರಣೆ:
ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯ ಬಳಿ ಇರುವ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಬಳಿ ಗಡಿ ಭದ್ರತಾ ಪಡೆಯ (ಬಿಎಸ್‌ಎಫ್) ಯೋಧರು ಸ್ವಾತಂತ್ರ್ಯ ದಿನಾಚರಣೆಯನ್ನು ಮಂಗಳವಾರ ಆಚರಿಸಿದರು.
ಇಲ್ಲಿನ ಬೆಟಾಲಿಯನ್‌ನ ಕಮ್ಯಾಂಡಿಂಗ್ ಅಧಿಕಾರಿ ಮೊಹಮದ್ ಇಸ್ರೇಲ್ ಅವರು ಧ್ವಜಾರೋಹಣ ನೆರವೇರಿಸಿದರು. ಯೋಧರು ದೇಶಪ್ರೇಮ ಕುರಿತಾದ ಘೋಷಣೆಗಳನ್ನು ಕೂಗಿ ಸಂಭ್ರಮಿಸಿದರು.
ಬಳಿಕ ಮಾತನಾಡಿದ ಮೊಹಮದ್ ಅವರು, 'ಮೂರು ಸೇನಾ ತುಕಡಿಗಳೊಂದಿಗೆ ನಮ್ಮ ಬೆಟಾಲಿಯನ್ ಅನ್ನು ಇಲ್ಲಿ (ಎಲ್‌ಒಸಿ) ನಿಯೋಜಿಸಲಾಗಿದೆ. ದೇಶದ ಗಡಿ ರಕ್ಷಣೆಯ ಜವಾಬ್ದಾರಿಯನ್ನು ನಮಗೆ ಕೊಟ್ಟಿರುವುದು ನಮ್ಮ ಅದೃಷ್ಟ. ಈ ಬಗ್ಗೆ ನಮಗೆ ಹೆಮ್ಮೆ ಇದೆ. ದೇಶದ ಪ್ರತಿಯೊಬ್ಬರು ಸುರಕ್ಷಿತವಾಗಿರುತ್ತಾರೆ ಎಂದು ನಾನು ಭರವಸೆ ನೀಡುತ್ತೇನೆ. ಎಲ್‌ಒಸಿಯಿಂದ ಯಾವುದೇ ಶತ್ರು ದೇಶದೊಳ್ಳಕ್ಕೆ ನುಗ್ಗಲು ಸಾಧ್ಯವಿಲ್ಲ' ಎಂದರು.
ಬಿಎಸ್‌ಎಫ್ ಕಾಶ್ಮೀರ ಸರಹದ್ದಿನ ಐಜಿ ಅಶೋಕ್ ಯಾದವ್ ಅವರು ಮಾತನಾಡಿ, 'ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಎರಗಬಹುದಾದ ಶತ್ರುಗಳ ದುಷ್ಟ ಯೋಜನೆಗಳನ್ನು ವಿಫಲಗೊಳಿಸಲು ಎಲ್‌ಒಸಿಯಾದ್ಯಂತ ಹೆಚ್ಚಿನ ಕಟ್ಟೆಚ್ಚರ ವಹಿಸಲಾಗಿದೆ' ಎಂದರು.