ನವದೆಹಲಿ: ಪ್ರಮುಖ ವೈದ್ಯಕೀಯ ಸಂಸ್ಥೆಯಾಗಿರುವ ಏಮ್ಸ್ ನಲ್ಲಿ ಬೋಧಕ ಸಿಬ್ಬಂದಿಗಳ ಕೊರತೆ ತೀವ್ರವಾಗಿದೆ.
ಒಟ್ಟು ಅನುಮತಿ ನೀಡಿರುವ ಹುದ್ದೆಗಳ ಪೈಕಿ ಶೇ.28 ರಷ್ಟು ಅಂದರೆ 347 ಬೋಧಕ ಸಿಬ್ಬಂದಿಗಳ ಹುದ್ದೆಗಳು ಖಾಲಿ ಬಿದ್ದಿವೆ. ದೇಶಾದ್ಯಂತ 20 ಹಳೆಯ ಹಾಗೂ ಹೊಸ ಏಮ್ಸ್ ಗಳಲ್ಲಿ ಒಟ್ಟಾರೆ ಬೋಧಕ ಸಿಬ್ಬಂದಿಗಳ ಸಂಖ್ಯೆಯಲ್ಲಿಯೂ ಕೊರತೆ ಎದುರಾಗಿದೆ. ಅಂಕಿ-ಅಂಶಗಳ ಪ್ರಕಾರ, ದೇಶಾದ್ಯಂತ ಏಮ್ಸ್ ನಲ್ಲಿ ಶೇ.40 ರಷ್ಟು ಹುದ್ದೆಗಳಿ ಭರ್ತಿಯಾಗದೇ ಹಾಗೆಯೇ ಉಳಿದಿದೆ ಎಂದು ರಾಜ್ಯಸಭೆಯಲ್ಲಿ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಹೇಳಿದ್ದಾರೆ. ಅಂಕಿಅಂಶಗಳ ಪ್ರಕಾರ, ಎಲ್ಲಾ AIIMS ನಲ್ಲಿ ಸುಮಾರು 5,527 ಅಧ್ಯಾಪಕರ ಹುದ್ದೆಗಳನ್ನು ಮಂಜೂರು ಮಾಡಲಾಗಿದೆ, ಅದರಲ್ಲಿ 2,161 ಪ್ರಸ್ತುತ ಖಾಲಿ ಇವೆ. ಅಂತಹ ಸಂಸ್ಥೆಗಳ ಪಟ್ಟಿಯಲ್ಲಿ ನವದೆಹಲಿಯ ಏಮ್ಸ್ ಅಗ್ರಸ್ಥಾನದಲ್ಲಿದೆ.
ಈ ವರ್ಷದ ಏಪ್ರಿಲ್‌ನಲ್ಲಿ, ಏಮ್ಸ್‌ನ ನವದೆಹಲಿ ನಿರ್ದೇಶಕ ಎಂ ಶ್ರೀನಿವಾಸ್ ಅವರು ಈ ವರ್ಷದ ಸೆಪ್ಟೆಂಬರ್‌ನೊಳಗೆ ಭರ್ತಿಯಾಗದ ಹುದ್ದೆಗಳನ್ನು "ಶೂನ್ಯ ಸಮೀಪ" ಕ್ಕೆ ತರುವ ಉದ್ದೇಶದಿಂದ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು 'ಮಿಷನ್ ನೇಮಕಾತಿ' ಪ್ರಾರಂಭಿಸಿರುವುದು ಗಮನಾರ್ಹ ಸಂಗತಿಯಾಗಿದೆ. ಆದರೆ ಈ ಕ್ರಮದಿಂದ ಈ ವರೆಗೂ ಎಷ್ಟು ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ ಎಂಬ ಬಗ್ಗೆ ಅಂಕಿ-ಅಂಶಗಳು ಲಭ್ಯವಿಲ್ಲ.
ಏತನ್ಮಧ್ಯೆ, ಅಧ್ಯಾಪಕರ ಕೊರತೆಯನ್ನು ಸುಧಾರಿಸಲು ಕೇಂದ್ರ ಆರೋಗ್ಯ ಸಚಿವಾಲಯ ಕೈಗೊಂಡ ಕ್ರಮಗಳನ್ನು ಪಟ್ಟಿ ಮಾಡಿದ ಸಚಿವರು, ಪ್ರಾಧ್ಯಾಪಕ ಮತ್ತು ಹೆಚ್ಚುವರಿ ಪ್ರಾಧ್ಯಾಪಕರ ಹುದ್ದೆಗಳ ನೇರ ನೇಮಕಾತಿಯ ಗರಿಷ್ಠ ವಯೋಮಿತಿಯನ್ನು 50 ವರ್ಷದಿಂದ 58 ವರ್ಷಕ್ಕೆ ಏರಿಸಲಾಗಿದೆ ಎಂದು ಹೇಳಿದರು.
" ಒಪ್ಪಂದದ ಮೂಲಕ ತೊಡಗಿಸಿಕೊಳ್ಳಲು ಸರ್ಕಾರಿ ವೈದ್ಯಕೀಯ ಕಾಲೇಜುಗಳು/ಸಂಸ್ಥೆಗಳ ನಿವೃತ್ತ ಅಧ್ಯಾಪಕರಿಗೆ 70 ವರ್ಷ ವಯಸ್ಸಿನವರೆಗೆ ಅನುಮತಿಸಲಾಗಿದೆ" ಎಂದು ಸಚಿವರು ಮಾಹಿತಿ ನೀಡಿದ್ದಾರೆ.