ಉಪ್ಪಳ: ಬೇಕೂರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಹಿರಿಯ ವಿದ್ಯಾರ್ಥಿಗಳ ತಂಡವೊಂದು ಕಿರಿಯ ವಿದ್ಯಾರ್ಥಿಗೆ ರ್ಯಾಗಿಂಗ್ ಮೂಲಕ ಮಾರಣಾಂತಿಕ ಹಲ್ಲೆ ನಡೆಸಿದೆ. ಗಾಯಾಳು, ಶಾಲೆಯ ಪ್ಲಸ್‍ವನ್ ತರಗತಿ ವಿದ್ಯಾರ್ಥಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾನೆ. ವಿದ್ಯಾರ್ಥಿಯ ಕಿವಿ ತಮ್ಮಟೆಗೆ ಗಾಯವುಂಟಾಗಿದೆ.
ಮಂಗಳವಾರ ಸಂಜೆ ಶಾಲೆಬಿಟ್ಟು ಮನೆಗೆ ತೆರಳಲು ಬಸ್ ನಿಲ್ದಾಣದಲ್ಲಿ ನಿಂತಿದ್ದ ಸಂದರ್ಭ ಆಗಮಿಸಿದ ಪ್ಲಸ್‍ಟು ತರಗತಿ ವಿದ್ಯಾರ್ಥಿಗಳ ತಂಡವೊಂದು ವಿದ್ಯಾರ್ಥಿ ಧರಿಸಿದ್ದ ಬೂಟಿನ ಬಗ್ಗೆ ಆಕ್ಷೇಪವೆತ್ತಿದೆ. ಮುಂದಕ್ಕೆ ಚಪ್ಪಲಿ ಹಾಕಿಕೊಂಡು ಶಾಲೆಗೆ ಆಗಮಿಸಬೇಕು ಎಂದು ತಾಕೀತು ಮಾಡಿರುವುದಲ್ಲದೆ, ಎಲ್ಲರೂ ಸೇರಿ ಕಪಾಳಕ್ಕೆ ಹೊಡೆದಿರುವುದಾಗಿ ಗಾಯಾಳು ದೂರಿದ್ದಾನೆ. ಗಾಯಗೊಂಡ ವಿದ್ಯಾರ್ಥಿ, ತಂಡದಿಂದ ಬಿಡಿಸಿಕೊಂಡು ಓಡಿ ಶಾಲಾ ಕಚೇರಿಯೊಳಗೆ ಸೆರಿಕೊಂಡಿದ್ದನು. ಶಿಕ್ಷಕರು ಈತನನ್ನು ಮಂಗಲ್ಪಾಡಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು, ನಂತರ ಉನ್ನತ ಚಿಕಿತ್ಸೆಗಾಗಿ ಮಂಗಳೂರಿಗೆ ಸಾಗಿಸಿದ್ದರು. ಕೆಲವು ದಿವಸಗಳ ಹಿಂದೆಯಷ್ಟೆ ಕುಂಬಳೆಯ ಶಾಲೆಯೊಂದರಲ್ಲಿ ಹಿರಿಯ ವಿದ್ಯಾರ್ಥಿಗಳ ತಂಡ ಕಿರಿಯ ವಿದ್ಯಾರ್ಥಿಗೆ ರ್ಯಾಗಿಂಗ್ ನಡೆಸಿ ಗಾಯಗೊಳಿಸಿತ್ತು.