ಮಂಜೇಶ್ವರ: ಮೀಯಪದವು ಶ್ರೀ ವಿದ್ಯಾವರ್ಧಕ ಪ್ರೌಢಶಾಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದ ವಿವಿಧ ಕ್ಲಬ್ ಗಳ ಉದ್ಘಾಟನಾ ಕಾರ್ಯಕ್ರಮ ಜರುಗಿತು.
ಮುಖ್ಯ ಶಿಕ್ಷಕ ಶಿವಶಂಕರ್ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ, 'ಶಾಲೆಯಲ್ಲಿನ ಕ್ಲಬ್ ಗಳು ವಿದ್ಯಾರ್ಥಿಗಳ ಜೀವನದಲ್ಲಿ ಮಹತ್ವದ ಸ್ಥಾನವಹಿಸುತ್ತದೆ. ಮುಂದಿನ ಸಾಮಾಜಿಕ ಜೀವನದಲ್ಲಿನ ಸಾಧನೆಗಳ ತಳಹದಿ ಶಾಲೆಗಳ ವಿದ್ಯಾರ್ಥಿ ಸಂಘಗಳು ಎಂದು ತಿಳಿಸಿದರು.
ವಿಜ್ಞಾನ ಶಿಕ್ಷಕಿ ಮೃದುಲಾ ಶೈಕ್ಷಣಿಕ ಸಂಘಗಳು ಮಗುವಿನ ಸೃಜನಾತ್ಮಕತೆಗಳ ಪ್ರತಿಬಿಂಬ. ಇಲ್ಲಿನ ಕನ್ನಡಿಯಂತಹ ಅವಕಾಶಗಳನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಂಡು ಬೆಳವಣಿಗೆ ಸಾಧಿಸಬೇಕು ಎಂದರು.
ದೈಹಿಕ ಶಿಕ್ಷಕ ಗ್ಯಾರಿ ಗಿಲ್ಮೋರ್ ಅವರು ಶುಭ ಹಾರೈಸಿದರು. ಶಾಲಾ ವಿದ್ಯಾರ್ಥಿ ನಾಯಕ ವಿನೀತ್ ಸ್ವಾಗತಿಸಿ, ವಿದ್ಯಾರ್ಥಿನಿ ಆಶಾ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿ ವಂಶಿ ವಂದಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ವಿವಿಧ ಸೃಜನಾತ್ಮಕ ರಚನೆ ಹಾಗೂ ಕಲಾತ್ಮಕ ಸೃಷ್ಟಿಗಳು ಪ್ರದರ್ಶನ ನಡೆಯಿತು.