ನವದೆಹಲಿ: ಯುವ ಪೀಳಿಗೆಗೆ ತಾಂತ್ರಿಕ ಶಿಕ್ಷಣ ಒದಗಿಸುವ ದೂರದೃಷ್ಟಿಯೊಂದಿಗೆ ಖರಗ್‌ಪುರದ ಭಾರತೀಯ ತಂತ್ರಜ್ಞಾನ ಸಂಸ್ಥೆ(ಐಐಟಿ) ಕೃತಕ ಬುದ್ಧಿಮತ್ತೆ (ಆರ್ಟಿಫಿಷಿಯಲ್ ಇಂಟಲಿಜೆನ್ಸ್) ಸರ್ಟಿಫಿಕೇಟ್ ಕೋರ್ಸ್ ಆರಂಭಿಸಿದೆ.
ಐಐಟಿಯ 'ಎಐ ಹಬ್' ಆಗಿರುವ 'ಎಐ ಫಾರ್ ಇಂಟರ್ ಡಿಸಿಪ್ಲಿನರಿ ಸೈಬರ್ ಫಿಸಿಕಲ್ ಸಿಸ್ಟಮ್ಸ್ (ಎಐ4ಐಸಿಪಿಎಸ್)' ವಿಭಾಗವು 'ಟಿಸಿಎಸ್ ಐಯಾನ್' ಸಹಯೋಗದಲ್ಲಿ 'ಹ್ಯಾಂಡ್ಸ್ ಆನ್ ಎಐ ಫಾರ್ ದ ರಿಯಲ್-ವರ್ಲ್ಡ್ ಅಪ್ಲಿಕೇಷನ್ಸ್' ಎಂಬ ಹೆಸರಿನ ಕೋರ್ಸ್ ಹಮ್ಮಿಕೊಂಡಿದೆ.
'ಬೆಳೆಯುತ್ತಿರುವ ಎಐ ಉದ್ಯಮದ ಬೇಡಿಕೆಯನ್ನು ಈ ಕೋರ್ಸ್ ಪೂರೈಸಲಿದೆ. ಎಲ್ಲರಿಗೂ ಶಿಕ್ಷಣ ಸಿಗಬೇಕೆಂಬ, ಪರಿಕಲ್ಪನೆ ಆಧಾರಿತ- ಅಂತರ ಶಾಸ್ತ್ರೀಯ ವಿಷಯಗಳ ಕಲಿಕೆಗೆ ಉತ್ತೇಜನ ನೀಡುವ, ಉದ್ಯೋಗಕ್ಕಾಗಿ ಕೌಶಲ ವೃದ್ಧಿಸಬೇಕೆಂಬ ರಾಷ್ಟ್ರೀಯ ಶಿಕ್ಷಣ ನೀತಿ- 2020ರ ಉದ್ದೇಶಗಳನ್ನು ಈ ಕಾರ್ಯಕ್ರಮ ಈಡೇರಿಸಲಿದೆ' ಎಂದು ಐಐಟಿ ಹೇಳಿದೆ.
ಸೆಪ್ಟೆಂಬರ್ 2ರಿಂದ ಕೋರ್ಸ್ ಆರಂಭವಾಲಿದೆ. ಮೂರು ತಿಂಗಳು ವಾರಾಂತ್ಯದಲ್ಲಿ ಮಾತ್ರ ನಡೆಯುವ ತರಗತಿಗಳು, ಪಠ್ಯ ಮತ್ತು ಪ್ರಾಯೋಗಿಕ ಕಲಿಕೆಯ ಸಮ್ಮಿಶ್ರಣವಾಗಿರಲಿವೆ. ಈ ಅವಧಿಯಲ್ಲಿ ವಿದ್ಯಾರ್ಥಿಗಳು ಪ್ರಶ್ನೋತ್ತರ, ಕಾರ್ಯಯೋಜನೆ, ಚರ್ಚೆ, ಸಮಾಲೋಚನೆ ಸೇರಿದಂತೆ ಹಲವು ರೀತಿಯಲ್ಲಿ ವಿಷಯ ಕಲಿಕೆಯಲ್ಲಿ ತೊಡಗಲಿದ್ದಾರೆ. ನಂತರ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ದೊರೆಯಲಿದೆ. ಔದ್ಯಮಿಕ ರಂಗದ ಪರಿಣತರೊಂದಿಗೆ ಸಮಾಲೋಚನೆ ನಡೆಸುವ ಅವಕಾಶವೂ ಅವರಿಗೆ ಸಿಗಲಿದೆ.
ತಾಂತ್ರಿಕ ರಂಗದ ಹೊಸಬರು, ಪದವಿ ಮತ್ತು ಸ್ನಾತಕೋತ್ತರ ಪದವಿ ಶಿಕ್ಷಣ ಪಡೆಯುತ್ತಿರುವವರು, ಎಐ/ಎಂಎಲ್ (ಮಷಿನ್ ಲರ್ನಿಂಗ್) ಇಂಜಿನಿಯರ್ ಆಗಲು ಬಯಸುತ್ತಿರುವವರು, ಪ್ರೋಗ್ರಾಮಿಂಗ್ ಬಗ್ಗೆ ಜ್ಞಾನ ಹೊಂದಿರುವವರು ಈ ಕೋರ್ಸ್‌ಗೆ ಅರ್ಜಿ ಸಲ್ಲಿಸಬಹುದು.
ಆಸಕ್ತರು learning.tcsionhub.in/hub/iit-kgp-certificate-program/hands-on-approach-to-ai/ಗೆ ಭೇಟಿ ನೀಡಿ.