ನವದೆಹಲಿ: ದೆಹಲಿಯ ಮೆಟ್ರೊ ರೈಲುಗಳಲ್ಲಿ ಸೀಲ್ ಆಗಿರುವ ಎರಡು ಮದ್ಯದ ಬಾಟಲಿಗಳನ್ನು ಒಯ್ಯಲು ನೀಡಿರುವ ಅನುಮತಿಯನ್ನು ಹಿಂಪಡೆಯಬೇಕೆಂದು ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟವು ಸೋಮವಾರ ದೆಹಲಿ ಮೆಟ್ರೊ ರೈಲು ನಿಗಮಕ್ಕೆ (ಡಿಎಂಆರ್‌ಸಿ) ಮನವಿ ಮಾಡಿದೆ.

'ಮೆಟ್ರೊ ರೈಲುಗಳಲ್ಲಿ ಮದ್ಯದ ಬಾಟಲಿಗಳನ್ನು ಒಯ್ಯಲು ಅನುಮತಿ ನೀಡಿದರೆ ಸಮಾಜಘಾತುಕ ಚಟುವಟಿಕೆಗಳು ಹೆಚ್ಚಾಗಲಿವೆ' ಎಂದು ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟವು (ಸಿಟಿಐ) ಡಿಎಂಆರ್‌ಸಿಗೆ ಬರೆದಿರುವ ಪತ್ರದಲ್ಲಿ ಆತಂಕ ವ್ಯಕ್ತಪಡಿಸಿದೆ.
'ಈ ಕುರಿತು ಒಕ್ಕೂಟದ ಪದಾಧಿಕಾರಿಗಳ ನಿಯೋಗವು ಡಿಎಂಆರ್‌ಸಿಯ ಮುಖ್ಯಸ್ಥ ವಿಕಾಸ್ ಕುಮಾರ್ ಅವರನ್ನು ಭೇಟಿ ಮಾಡಿ ಚರ್ಚಿಸಲಿದೆ' ಎಂದೂ ಒಕ್ಕೂಟವು ಹೇಳಿದೆ.
'ಡಿಎಂಆರ್‌ಸಿಯು ಈ ಅನುಮತಿಯನ್ನು ವಾಪಸ್ ಪಡೆಯಬೇಕು. ಯಾರಾದರೂ ಮದ್ಯದ ಬಾಟಲಿಗಳನ್ನು ಮೆಟ್ರೊ ರೈಲಿನೊಳಗೆ ಒಯ್ದು ಅಲ್ಲಿ ಮದ್ಯ ಸೇವಿಸಲು ಆರಂಭಿಸಿದರೆ ಅದನ್ನು ತಡೆಯುವುದು ಹೇಗೆ' ಎಂದು ಸಿಟಿಐ ಮುಖ್ಯಸ್ಥ ಬ್ರಿಜೇಶ್ ಗೋಯಲ್ ಅವರು ಪ್ರಶ್ನಿಸಿದ್ದಾರೆ.
ಸಿಟಿಐನ ಮಹಿಳಾ ಘಟಕದ ಅಧ್ಯಕ್ಷೆ ಮಾಳವಿಕಾ ಸಾಹ್ನಿ ಅವರು ತಮಗೆ ಅನೇಕ ಮಹಿಳೆಯರು ಮೆಟ್ರೊದೊಳಗೆ ಮದ್ಯದ ಬಾಟಲಿಗಳನ್ನು ಒಯ್ಯಲು ಅನುಮತಿ ನೀಡಬಾರದು ಎಂದು ಹೇಳಿ ದೂರವಾಣಿ ಕರೆ ಹಾಗೂ ಸಂದೇಶಗಳನ್ನು ಕಳುಹಿಸಿದ್ದಾರೆ ಎಂದು ತಿಳಿಸಿದ್ದಾರೆ.
'ಮೆಟ್ರೊ ರೈಲಿನ ಜಾಲವು ದೆಹಲಿ, ಹರಿಯಾಣ ಮತ್ತು ಉತ್ತರ ಪ್ರದೇಶವನ್ನು ವ್ಯಾಪಿಸಿದೆ. ಈ ರಾಜ್ಯಗಳು ತಮ್ಮದೇ ಆದ ಅಬಕಾರಿ ನೀತಿಯನ್ನು ಹೊಂದಿವೆ. ಈ ನಿರ್ಧಾರವನ್ನು ಹಿಂಪಡೆಯಬೇಕು' ಎಂದೂ ಸಿಟಿಐ ಪ್ರಕಟಣೆಯಲ್ಲಿ ತಿಳಿಸಿದೆ.