ನವದೆಹಲಿ : 'ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆಯ ಗರ್ಭಪಾತಕ್ಕೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆ ಬಗ್ಗೆ ನ್ಯಾಯಾಲಯಗಳು ನಿರಾಸಕ್ತಿ ಹಾಗೂ ಅರೆಮನಸ್ಸನ್ನು ಹೊಂದಬಾರದು. ಸಾಮಾನ್ಯ ಪ್ರಕರಣಗಳಿಗೆ ಅನ್ವಯಿಸುವ ಮಾನದಂಡವನ್ನು ಇಂತಹ ವಿಷಯಗಳಲ್ಲಿ ಪಾಲಿಸಬಾರದು. ತ್ವರಿತವಾಗಿ ಇತ್ಯರ್ಥಕ್ಕೆ ಆಸ್ಥೆವಹಿಸಬೇಕು' ಎಂದು ಸುಪ್ರೀಂ ಕೋರ್ಟ್ ಶನಿವಾರ ಪ್ರತಿಪಾದಿಸಿದೆ.
ಅತ್ಯಾಚಾರಕ್ಕೆ ತುತ್ತಾದ 25 ವರ್ಷದ ಮಹಿಳೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನಾ ಹಾಗೂ ಉಜ್ಜಲ್ ಭುಯಾನ್ ಅವರಿದ್ದ ವಿಭಾಗೀಯ ನ್ಯಾಯಪೀಠವು, ಸಂತ್ರಸ್ತೆಯ ಅರ್ಜಿಯ ವಿಚಾರಣೆಯನ್ನು ಮುಂದೂಡಿರುವ ಗುಜರಾತ್ ಹೈಕೋರ್ಟ್‌ನ ಆದೇಶದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತು. 'ಈ ಪ್ರಕರಣದಲ್ಲಿ 12 ದಿನಗಳ ಅಮೂಲ್ಯ ಸಮಯ ವ್ಯರ್ಥವಾಗಿದೆ' ಎಂದು ಹೇಳಿತು.
'26 ವಾರಗಳು ಪೂರ್ಣಗೊಂಡಿದ್ದ ಸಂತ್ರಸ್ತೆಯು ಗರ್ಭಪಾತಕ್ಕೆ ಅನುಮತಿ ಕೋರಿ ಆಗಸ್ಟ್ 7ರಂದು ಹೈಕೋರ್ಟ್‌ನ ಮೆಟ್ಟಿಲೇರಿದ್ದರು. ಆಕೆಯ ಗರ್ಭಾವಸ್ಥೆ ಹಾಗೂ ಆರೋಗ್ಯದ ಸ್ಥಿತಿಗತಿ ಬಗ್ಗೆ ಪರೀಕ್ಷಿಸುವ ಸಂಬಂಧ ವೈದ್ಯಕೀಯ ಪರಿಣತರ ತಂಡದ ರಚನೆಗೆ ನ್ಯಾಯಾಲಯವು ಆಗಸ್ಟ್ 8ರಂದು ಸೂಚಿಸಿತ್ತು. 10ರಂದು ತಂಡವು ಕೋರ್ಟ್‌ಗೆ ವರದಿ ಸಲ್ಲಿಸಿದೆ' ಎಂದು ಸಂತ್ರಸ್ತೆಯ ಪರ ವಕೀಲರು ನ್ಯಾಯಪೀಠಕ್ಕೆ ತಿಳಿಸಿದರು.
ಆಗಸ್ಟ್ 11ರಂದು ಹೈಕೋರ್ಟ್ ಈ ವರದಿಯನ್ನು ಪರಿಶೀಲಿಸಿ ಇದೇ 23ಕ್ಕೆ ವಿಚಾರಣೆಯನ್ನು ಮುಂದೂಡಿರುವ ಬಗ್ಗೆ ನ್ಯಾಯಪೀಠವು ಅಚ್ಚರಿ ವ್ಯಕ್ತಪಡಿಸಿತು.
'ಸಂತ್ರಸ್ತೆಯ ವಿಷಯದಲ್ಲಿ ಪ್ರತಿದಿನವೂ ನಿರ್ಣಾಯಕವಾಗಿದೆ. ಆದರೂ, ವಿಳಂಬ ಮಾಡಿರುವುದು ಕಂಡುಬರುತ್ತದೆ ಎಂದು ಹೇಳಿತು.
ಅಲ್ಲದೇ, ಆಕೆಯ ವಕೀಲರು ಆಗಸ್ಟ್ 17ರಂದು ಹೈಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಲಾಗಿದೆ. ಇದಕ್ಕೆ ಸಕಾರಣವನ್ನೂ ನೀಡಿಲ್ಲ. ವೆಬ್‌ಸೈಟ್‌ನಲ್ಲೂ ಆದೇಶದ ಪ್ರತಿಯನ್ನು ಅಪ್‌ಲೋಡ್ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಪೀಠವು, ಈ ಬಗ್ಗೆ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಅವರನ್ನು ವಿಚಾರಣೆಗೆ ಒಳಪಡಿಸುವಂತೆ ಸುಪ್ರೀಂ ಕೋರ್ಟ್‌ನ ಸೆಕ್ರೆಟರಿ ಜನರಲ್‌ಗೆ ನಿರ್ದೇಶನ ನೀಡಿತು.
ಹೈಕೋರ್ಟ್‌ನ ಆದೇಶದವರೆಗೆ ನಾವು ಕಾಯಲು ಸಿದ್ಧ. ಆದರೆ, ಅದರ ಖಚಿತತೆ ತಿಳಿಯದೇ ಮತ್ತೊಂದು ಆದೇಶ ಪ್ರಕಟಿಸುವುದು ಹೇಗೆ? ಎಂದ ಪೀಠವು, ಸಂತ್ರಸ್ತೆಯ ಆರೋಗ್ಯ ಕುರಿತು ವೈದ್ಯರು ನೀಡಿದ್ದ ವರದಿ ಬಗ್ಗೆ ವಿವರಣೆ ಕೇಳಿತು.
ಇದಕ್ಕೆ ಉತ್ತರಿಸಿದ ವಕೀಲರು, 'ಸಂತ್ರಸ್ತೆಗೆ ಗರ್ಭಪಾತ ಮಾಡಬಹುದು ಎಂದು ವೈದ್ಯಕೀಯ ವರದಿಯಲ್ಲಿ ಹೇಳಲಾಗಿದೆ' ಎಂದರು.
'ಸಂತ್ರಸ್ತೆಯು ಗರ್ಭ ಧರಿಸಿ 28ನೇ ವಾರ ಸಮೀಪಿಸುತ್ತಿದೆ. ಹಾಗಾಗಿ, ಗರ್ಭಪಾತಕ್ಕೆ ಸಂಬಂಧಿಸಿದಂತೆ ವೈದ್ಯಕೀಯ ತಂಡದಿಂದ ಹೊಸ ವರದಿ ಸಲ್ಲಿಸಬೇಕಿದೆ' ಎಂದು ಪೀಠದ ಗಮನ ಸೆಳೆದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠವು, 'ಸಂತ್ರಸ್ತೆಯನ್ನು ಮತ್ತೆ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಭಾನುವಾರ ಸಂಜೆ 6ಗಂಟೆಯೊಳಗೆ ವರದಿ ಸಲ್ಲಿಸಬಹುದು' ಎಂದು ಸೂಚಿಸಿತು.
ಆಗಸ್ಟ್ 21ರಂದು ಈ ಅರ್ಜಿಯನ್ನೇ ಮೊದಲು ವಿಚಾರಣೆಗೆ ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದ ಪೀಠವು, ಪ್ರಕರಣ ಸಂಬಂಧ ಗುಜರಾತ್ ಸರ್ಕಾರ ಮತ್ತು ಸಂಬಂಧಪಟ್ಟ ಸಂಸ್ಥೆಗಳು ಅಭಿಪ್ರಾಯವನ್ನು ಸಾದರಪಡಿಸಲು ನಿರ್ದೇಶನ ನೀಡಿತು.