ಚೆನೈ (PTI): ಮದುರೈ ರೈಲು ನಿಲ್ದಾಣದ ಪ್ರವಾಸಿಗರ ರೈಲು ಬೋಗಿಯಲ್ಲಿ ಸಂಭವಿಸಿದ ಅಗ್ನಿ ದುರಂತದ ಬಗ್ಗೆ ದಕ್ಷಿಣ ವೃತ್ತದ ರೈಲ್ವೆ ಸುರಕ್ಷತಾ ಕಮಿಷನರ್ ಎ.ಎಂ.ಚೌಧರಿ ಅವರು ಭಾನುವಾರ ತನಿಖೆ ಆರಂಭಿಸಿದ್ದಾರೆ.
ಚೆನೈ (PTI): ಮದುರೈ ರೈಲು ನಿಲ್ದಾಣದ ಪ್ರವಾಸಿಗರ ರೈಲು ಬೋಗಿಯಲ್ಲಿ ಸಂಭವಿಸಿದ ಅಗ್ನಿ ದುರಂತದ ಬಗ್ಗೆ ದಕ್ಷಿಣ ವೃತ್ತದ ರೈಲ್ವೆ ಸುರಕ್ಷತಾ ಕಮಿಷನರ್ ಎ.ಎಂ.ಚೌಧರಿ ಅವರು ಭಾನುವಾರ ತನಿಖೆ ಆರಂಭಿಸಿದ್ದಾರೆ.
ಚೌಧರಿ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಬೆಂಕಿಗೆ ಆಹುತಿಯಾದ ರೈಲು ಬೋಗಿ ಪರಿಶೀಲಿಸಿದರು. ಅವರೊಂದಿಗೆ ದಕ್ಷಿಣ ರೈಲ್ವೆಯ ಅಧಿಕಾರಿ ಹಾಗೂ ರೈಲ್ವೆ ಮಂಡಳಿ ಸದಸ್ಯರೊಬ್ಬರು ಸಹ ಹಾಜರಿದ್ದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಚೌಧರಿ, ಇದರಲ್ಲಿ ಪಿತೂರಿ ನಡೆಸಿರುವುದು ಕಂಡು ಬಂದಿಲ್ಲ. ಗಾಯಾಳು ಪ್ರಯಾಣಿಕರ ವಿಚಾರಣೆ ನಡೆಸಿದ್ದೇನೆ. ನಿಲ್ಲಿಸಿದ್ದ ಬೋಗಿಯಲ್ಲಿ ಬೆಂಕಿ ಹೇಗೆ ಹತ್ತಿಕೊಂಡಿತು ಎಂಬುದರ ಕುರಿತು ಅವರಿಂದ ಹೇಳಿಕೆಗಳನ್ನು ಪಡೆಯಲಾಗಿದೆ. ತನಿಖೆ ಪೂರ್ಣಗೊಳಿಸಿ ವರದಿ ಸಲ್ಲಿಸಲು ಕನಿಷ್ಠ ತಿಂಗಳು ಬೇಕಾಗುತ್ತದೆ ಎಂದು ಹೇಳಿದರು.
ಮದುರೈ ರೈಲು ನಿಲ್ದಾಣದಲ್ಲಿ ಪ್ರವಾಸಿಗರ ರೈಲು ಬೋಗಿಯಲ್ಲಿ ಶನಿವಾರ ಮುಂಜಾನೆ ಸಂಭವಿಸಿದ ಅಗ್ನಿ ದುರಂತದಲ್ಲಿ ಮೃತಪಟ್ಟ ಒಂಬತ್ತು ಯಾತ್ರಿಗಳ ಮೃತದೇಹಗಳನ್ನು ವಿಮಾನದ ಮೂಲಕ ಲಖನೌಗೆ ಸಾಗಿಸಲಾಗಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.
ಐದು ಮೃತದೇಹಗಳನ್ನು ವಿಮಾನದ ಮೂಲಕ ನೇರವಾಗಿ ಲಖನೌಗೆ ಕಳುಹಿಸಿದರೆ, ನಾಲ್ಕು ಶವಗಳನ್ನು ಮತ್ತೊಂದು ವಿಮಾನದಲ್ಲಿ ಬೆಂಗಳೂರು ಮೂಲಕ ಕಳುಹಿಸಲಾಗಿದೆ. ಬೆಂಕಿ ಅಪಘಾತದಲ್ಲಿ ಗಾಯಗೊಂಡವರ ಸಂಬಂಧಿಕರಾದ 14 ಪ್ರಯಾಣಿಕರು ಮತ್ತು ನಾಲ್ವರು ರೈಲ್ವೆ ಪೊಲೀಸ್ ಸಿಬ್ಬಂದಿ ಸಹ ವಿಮಾನದಲ್ಲಿ ಪ್ರಯಾಣಿಸಿದರು.
ಅಗ್ನಿ ದುರಂತದಲ್ಲಿ ಒಂಬತ್ತು ಜನರು ಮೃತಪಟ್ಟು, ಎಂಟು ಜನರು ಗಾಯಗೊಂಡಿದ್ದಾರೆ. ಅಡುಗೆ ಅನಿಲ ಸಿಲಿಂಡರ್ ಸ್ಫೋಟಗೊಂಡಿರುವುದೇ ಅನಾಹುತಕ್ಕೆ ಕಾರಣ ಎಂದು ಹೇಳಲಾಗಿದೆ.