ನಾಗಾಂವ್: ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ.ಸೋನಾಲಿ ಘೋಷ್ ಅವರು ಮುಂದಿನ ತಿಂಗಳಿನಿಂದ ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ಮೊದಲ ಮಹಿಳಾ ಕ್ಷೇತ್ರ(ಫೀಲ್ಡ್) ನಿರ್ದೇಶಕರಾಗಲು ಸಿದ್ಧರಾಗಿದ್ದಾರೆ.
ನಾಗಾಂವ್, ಗೋಲಾಘಾಟ್, ಕರ್ಬಿ ಆಂಗ್ಲಾಂಗ್, ಸೋನಿತ್‌ಪುರ್ ಮತ್ತು ಬಿಸ್ವನಾಥ್ ಜಿಲ್ಲೆಗಳಲ್ಲಿ ಹರಡಿರುವ ಒಂದು ಕೊಂಬಿನ ಘೇಂಡಾಮೃಗಗಳಿಗೆ ಹೆಸರುವಾಸಿಯಾದ ಅರಣ್ಯದ ಮುಖ್ಯಸ್ಥರಾಗಿ ಸೋನಾಲಿ ಘೋಷ್ ಅವರನ್ನು ಸೆಪ್ಟೆಂಬರ್ 1 ರಿಂದ ಜಾರಿಗೆ ಬರುವಂತೆ ನೇಮಕ ಮಾಡಿ ಅಸ್ಸಾಂ ಸರ್ಕಾರ ಈಗಾಗಲೇ ಆದೇಶ ಹೊರಡಿಸಿದೆ.
ಭಾರತೀಯ ಅರಣ್ಯ ಸೇವಾ ಅಧಿಕಾರಿ ಘೋಷ್ ಅವರು, ಆಗಸ್ಟ್ 31 ರಂದು ನಿವೃತ್ತರಾಗಲಿರುವ ಹಾಲಿ ಕ್ಷೇತ್ರ ನಿರ್ದೇಶಕ ಜತೀಂದ್ರ ಶರ್ಮಾ ಅವರಿಂದ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಘೋಷ್ ಅವರು ಪ್ರಸ್ತುತ ಗುವಾಹಟಿಯಲ್ಲಿರುವ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಅರಣ್ಯ ಪಡೆ ಮುಖ್ಯಸ್ಥರ ಕಚೇರಿಯಲ್ಲಿ ಸಂಶೋಧನಾ ಶಿಕ್ಷಣ ಮತ್ತು ಕಾರ್ಯ ಯೋಜನೆ ವಿಭಾಗದ ಮುಖ್ಯ ಸಂರಕ್ಷಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರ ಪ್ರಕಾರ, 118 ವರ್ಷ ಹಳೆಯದಾದ ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ನಿರ್ದೇಶಕಿಯಾಗಿ ಅಧಿಕಾರ ವಹಿಸಿಕೊಳ್ಳುತ್ತಿರುವ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಘೋಷ್ ಪಾತ್ರರಾಗಿದ್ದಾರೆ.