ನವದೆಹಲಿ (PTI): ಬಹು ರಾಜ್ಯ ಸಹಕಾರ ಸಂಘಗಳ (ತಿದ್ದುಪಡಿ) ಮಸೂದೆ-2023 ಅನ್ನು ಸಂಸತ್‌ನಲ್ಲಿ ಮಂಗಳವಾರ ಅಂಗೀಕರಿಸಲಾಯಿತು.
ಕೇಂದ್ರ ಸಹಕಾರ ಖಾತೆ ರಾಜ್ಯ ಸಚಿವ ಬಿ.ಎಲ್.ವರ್ಮಾ ಅವರು ರಾಜ್ಯಸಭೆಯಲ್ಲಿ ತಿದ್ದುಪಡಿ ಮಸೂದೆಯನ್ನು ಮಂಡಿಸಿದರು. ಗದ್ದಲ ನಡೆಸಿದ್ದ ವಿರೋಧ ಪಕ್ಷಗಳ ಸದಸ್ಯರು ನಂತರ ಸಭಾತ್ಯಾಗ ಮಾಡಿದ್ದರು.
ಜುಲೈ 25ರಂದು ಲೋಕಸಭೆಯಲ್ಲಿ ಈ ಮಸೂದೆಗೆ ಅಂಗೀಕಾರ ನೀಡಲಾಗಿತ್ತು.
ಮಸೂದೆ ಕುರಿತ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವ ವರ್ಮಾ, 'ಸಹಕಾರ ಸಂಘಗಳಲ್ಲಿ ನೌಕರರ ನೇಮಕಾತಿಗೆ ನಿಯಮಗಳನ್ನು ರೂಪಿಸಲು ಈ ಮಸೂದೆ ಅವಕಾಶ ಕಲ್ಪಿಸುತ್ತದೆ. ಜೊತೆಗೆ, ಸ್ವಜನ ಪಕ್ಷಪಾತಕ್ಕೆ ಕಡಿವಾಣ ಹಾಕಲಿದೆ' ಎಂದರು.
'ಉದ್ಯೋಗ ಸೃಷ್ಟಿ ವಿಷಯಕ್ಕೆ ಬಂದಾಗ ಖಾಸಗಿ ವಲಯದಲ್ಲಿ ಮಿತಿ ಇದೆ. ಎಲ್‌ಪಿಜಿ, ಪೆಟ್ರೋಲ್ ಪಂಪ್‌ಗಳ ಡೀಲರ್‌ಶಿಪ್‌ಗಳಿಗೆ ಅವಕಾಶ ನೀಡುವ ಮೂಲಕ ಸಹಕಾರ ಕ್ಷೇತ್ರದ ಕಾರ್ಯವ್ಯಾಪ್ತಿ ಹಿಗ್ಗಿಸಿ, ಅವುಗಳನ್ನು ಬಲಪಡಿಸಲಾಗುತ್ತದೆ' ಎಂದು ಸದನದ ಗಮನಕ್ಕೆ ತಂದರು.
'ಸಹಕಾರ ಸಂಘಗಳಿಗೆ ನಡೆಯುವ ಚುನಾವಣೆಯಲ್ಲಿ ಸುಧಾರಣೆ ತರಲು ತಿದ್ದುಪಡಿ ಮಸೂದೆ ಅವಕಾಶ ನೀಡುತ್ತದೆ. ಇದಕ್ಕಾಗಿ ಸಹಕಾರ ಚುನಾವಣೆ ಪ್ರಾಧಿಕಾರ ಸ್ಥಾಪಿಸಲಾಗುತ್ತದೆ' ಎಂದು ವಿವರಿಸಿದರು.
ಬಿಜೆಡಿಯ ನಿರಂಜನ್ ಬಿಶಿ, ವೈಎಸ್‌ಆರ್‌ಸಿಪಿಯ ಎಸ್.ನಿರಂಜನ್ ರೆಡ್ಡಿ ಮತ್ತು ಎಐಎಡಿಎಂಕೆ ಸಂಸದ ಎಂ.ತಂಬಿದೊರೈ ಅವರು ಮಸೂದೆಯನ್ನು ಬೆಂಬಲಿಸಿ ಮಾತನಾಡಿದರು.