ಪಾಟ್ನ: ಪತ್ನಿಯ ವಿರುದ್ಧ ಕ್ರೂರತನದ ಆರೋಪ ಹೊರಿಸಿ ಸ್ಥಳೀಯ್ ಆರ್ ಎಸ್ಎಸ್ ಕಚೇರಿಯಲ್ಲಿ ವಾಸಿಸುತ್ತಿದ್ದ ವ್ಯಕ್ತಿಗೆ ಕೆಳ ಹಂತದ ನ್ಯಾಯಾಲಯ ನೀಡಿದ್ದ ವಿಚ್ಛೇದನವನ್ನು ಪಾಟ್ನಾ ಹೈಕೋರ್ಟ್ ರದ್ದುಗೊಳಿಸಿದೆ.
ನ್ಯಾ.ಪಿಬಿ ಬಜಂತ್ರಿ ಹಾಗೂ ನ್ಯಾ. ಜಿತೇಂದ್ರ ಕುಮಾರ್ ಅವರಿದ್ದ ವಿಭಾಗೀಯ ಪೀಠ, ಈ ಆದೇಶ ನೀಡಿದೆ.
07.10.2017 ರಂದು ನಳಂದ ಜಿಲ್ಲೆಯ ಕೌಟುಂಬಿಕ ನ್ಯಾಯಾಲಯ ದಂಪತಿಗೆ ವಿಚ್ಛೇದನ ನೀಡಿತ್ತು. ಆದರೆ ಈ ಆದೇಶವನ್ನು ಪ್ರಶ್ನಿಸಿ ನಿಶಾ ಗುಪ್ತಾ ಎಂಬುವವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಲು ಒಪ್ಪಿದ ಹೈಕೋರ್ಟ್, ನಳಂದ ಜಿಲ್ಲೆಯ ಕೌಟುಂಬಿಕ ನ್ಯಾಯಾಲಯದ ತೀರ್ಪನ್ನು ತಡೆ ಹಿಡಿದಿದೆ.
ಉದಯ್ ಚಂದ್ ಗುಪ್ತಾ ಎಂಬ ವ್ಯಕ್ತಿಗೆ ನೀಡಲಾಗಿರುವ ವಿಚ್ಛೇದನ ಕಾನೂನಿನ ದೃಷ್ಟಿಯಿಂದ ಊರ್ಜಿತವಾಗುವುದಿಲ್ಲ. ಏಕೆಂದರೆ ಉದಯ್ ಚಂದ್ ಗುಪ್ತಾ ವಿಚ್ಛೇದನ ಪಡೆಯುವುದಕ್ಕೆ ನೀಡಿದ್ದ, ಪತ್ನಿ ಕ್ರೂರಿ ಎಂಬ ಕಾರಣವನ್ನು ಸಾಬೀತುಪಡಿಸುವಲ್ಲಿ ವಿಫಲರಾಗಿದ್ದಾರೆ ಎಂದು ಹೈಕೋರ್ಟ್ ಹೇಳಿದೆ.
"ವೈವಾಹಿಕ ಜೀವನದಲ್ಲಿ ಸಾಮಾನ್ಯ ಸಮಸ್ಯೆಗಳು ಇದ್ದಿರಬಹುದು, ಆದರೆ ಖಂಡಿತವಾಗಿಯೂ ಮೇಲ್ಮನವಿ ಸಲ್ಲಿಸಿರುವ ಪ್ರತಿವಾದಿಯೂ ಆಗಿರುವ, ಪತ್ನಿ ಪತಿಯ ಕಡೆಗೆ ಯಾವುದೇ ಕ್ರೌರ್ಯ ಎಸಗಿರುವುದು ಕಂಡುಬಂದಿಲ್ಲ. ವಾಸ್ತವದಲ್ಲಿ ಪತಿಯೇ ಕ್ರೌರ್ಯ ಎಸಗಿರುವುದು ಕಂಡುಬಂದಿದೆ ಎಂದು ಹೈಕೋರ್ಟ್ ಹೇಳಿದೆ.
ಪತ್ನಿ ತನ್ನ ಮಕ್ಕಳೊಂದಿಗೆ ಪತಿಯ ಮನೆಯಲ್ಲೇ ವಾಸವಿದ್ದಾರೆ. ಆದರೆ ಆಕೆಯ ಪತಿ ಆರ್ ಎಸ್ಎಸ್ ಕಚೇರಿಯಲ್ಲಿ ವಾಸವಿದ್ದಾರೆ ಎಂಬುದನ್ನು ಕೋರ್ಟ್ ಗಮನಿಸಿ ಈ ತೀರ್ಪು ನೀಡಿದೆ.