ಪೆರ್ಲ: ಎಣ್ಮಕಜೆ ಗ್ರಾ.ಪಂ.ವತಿಯಿಂದ 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಾಧಕರಿಗೆ ಸನ್ಮಾನ, ಎಪ್ಲಸ್ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ದೇಶ ಭಕ್ತಿ ಗೀತೆಗಳ ಸಂಗೀತ ಸೌರಭ ಕಾರ್ಯಕ್ರಮದೊಂದಿಗೆ ವೈವಿಧ್ಯಮಯವಾಗಿ ಆಚರಿಸಲಾಯಿತು. ಬಜಕೂಡ್ಲು ಸಮೀಪದ ಕಾನ ಎಂಬಲ್ಲಿರುವ ಸಾಂತ್ವನ ವಿಶೇಷ ಬಡ್ಸ್ ಶಾಲೆಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಉದ್ಘಾಟಿಸಿದರು. ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್.ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಪಂಚಾಯಿತಿ ಸದಸ್ಯ ನಾರಾಯಣ ನಾಯ್ಕ್, ಬ್ಲಾಕ್ ಪಂ.ಸದಸ್ಯ ಕೆ.ಪಿ.ಅನಿಲ್ ಕುಮಾರ್, ಎಣ್ಮಕಜೆ ಗ್ರಾ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಿ.ಎಸ್.ಗಾಂಭೀರ್, ಸೌದಾಭಿ ಹನೀಫ್, ಜಯಶ್ರೀ ಕುಲಾಲ್ ಹಾಗೂ ಪಂಚಾಯತಿ ಪ್ರತಿನಿಧಿಗಳು, ಪಂ.ಉದ್ಯೋಗಿಗಳು, ಪಂ.ಯೋಜನಾ ಸಮಿತಿಯ ಉಪಾಧ್ಯಕ್ಷೆ ಆಯಿಷಾ ಎ.ಎ, ವಿವಿಧ ಇಲಾಖಾ ಅಧಿಕಾರಿಗಳು ಪಾಲ್ಗೊಂಡರು. ಈ ಸಂದರ್ಭದಲ್ಲಿ ಭಾರತೀಯ ಗಡಿ ಭದ್ರತಾ ಪಡೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಅಪ್ಪಯ್ಯ ಮಣಿಯಾಣಿ ಕಾಟುಕುಕ್ಕೆ, ಸದಾಶಿವ ನಾಯ್ಕ್ ಖಂಡಿಗೆ, ಈಶ್ವರ ನಾಯ್ಕ ವಾಣಿನಗರ, ನಿವೃತ್ತ ಪ್ರಾಂಶುಪಾಲ ಬಾಪೂಂಞ ಮಾಸ್ತರ್, ಸಾಹಿತಿ ಹರೀಶ್ ಪೆರ್ಲ, ಕಾಷ್ಠ ಶಿಲ್ಪಿ, ನ್ಯಾಯವಾದಿ ಜಿ.ಕೆ.ಭಟ್ ಪೂವಾಳೆ, ಆಯುರ್ವೇದಿಕ್ ಶಿಕ್ಷಣದಲ್ಲಿ ಪ್ರಥಮ ರ್ಯಾಂಕ್ ಚಿನ್ನದ ಪದಕ ವಿಜೇತೆ ಡಾ.ರಮ್ಯ ದರ್ಬೆ, ಕೃಷಿ ಯಂತ್ರೋಪಕರಣ ಅವಿಷ್ಕರಿಸಿದ ಗೋಪಾಲಕೃಷ್ಣ ಶರ್ಮ ಕಾಚಿಕ್ಕಾಡು, ಯುವ ಕವಯಿತ್ರಿ ಸುಜಯ ಸಜಂಗದ್ದೆ, ಕ್ರೀಡಾ ಪಟು ರಾಕೇಶ್ ಕುಮಾರ್ ನಲ್ಕ, ಹಾಗೂ ಎಸ್ಸಸ್ಸೆಲ್ಸಿ, ಪ್ಲಸ್ ಟು ಪರೀಕ್ಷೆಯಲ್ಲಿ ಎ ಪ್ಲಸ್ ಗಳಿಸಿದ ಪಂಚಾಯತಿ ಮಟ್ಟದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಎಸ್ಸಸ್ಸೆಲ್ಸಿ ಪರೀಕ್ಷೆಯಲ್ಲಿ ನೂರು ಶೇಕಡಾ ತೇರ್ಗಡೆ ದಾಖಲಿಸಿದ ಪೆರ್ಲ ಸತ್ಯನಾರಾಯಣ ಶಾಲೆ, ಪಡ್ರೆ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆ, ಕಾಟುಕುಕ್ಕೆ ಶ್ರೀಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆ, ಶೇಣಿ ಶ್ರೀಶಾರದಾಂಬ ಹೈಯರ್ ಸೆಕೆಂಡರಿ ಶಾಲೆಗೆ ವಿಶೇಷ ಪುರಸ್ಕಾರ ವಿತರಿಸಲಾಯಿತು. ಪ್ರೇಮ್ ಚಂದ್ ಪಿ ಎಸ್ ಸ್ವಾಗತಿಸಿ, ಬಡ್ಸ್ ಶಾಲೆ ಪ್ರಾಂಶುಪಾಲ ಮರಿಯಾಂಬಿ ವಂದಿಸಿದರು.