ಲೇಹ್: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಭಾನುವಾರ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದು, 'ಲಡಾಖ್‌ನ ಒಂದಿಂಚೂ ಭೂಮಿಯನ್ನು ಚೀನಾ ವಶಪಡಿಸಿಕೊಂಡಿಲ್ಲ ಎಂದು ಮೋದಿ ಅವರು ಹೇಳಿರುವುದು ಸತ್ಯಕ್ಕೆ ದೂರವಾದ ಮಾತು' ಎಂದರು.
ಲೇಹ್: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಭಾನುವಾರ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದು, 'ಲಡಾಖ್‌ನ ಒಂದಿಂಚೂ ಭೂಮಿಯನ್ನು ಚೀನಾ ವಶಪಡಿಸಿಕೊಂಡಿಲ್ಲ ಎಂದು ಮೋದಿ ಅವರು ಹೇಳಿರುವುದು ಸತ್ಯಕ್ಕೆ ದೂರವಾದ ಮಾತು' ಎಂದರು.
ತಮ್ಮ ತಂದೆ ಹಾಗೂ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಜನ್ಮದಿನದ ಅಂಗವಾಗಿ ಗೌರವನಮನ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಚೀನಾ ಸೇನೆಯು ಲಡಾಖ್‌ನ ಗೋಮಾಳವನ್ನು ಚೀನಾ ಸೇನೆ ಸ್ವಾಧೀನಪಡಿಸಿಕೊಂಡಿರುವ ಹಿನ್ನೆಲೆಯಲ್ಲಿ ಇಲ್ಲಿನ ಜನರು ತಲ್ಲಣಗೊಂಡಿದ್ದಾರೆ' ಎಂದು ತಿಳಿಸಿದರು.
'ಚೀನಾ ಸೇನೆಯು ಒಳನುಸುಳಿ ತಮ್ಮ ಗೋಮಾಳ ವಶಪಡಿಸಿಕೊಂಡಿದೆ. ಅಲ್ಲಿಗೆ ಪ್ರವೇಶಿಸಲು ತಮಗ್ಯಾರಿಗೂ ಅವಕಾಶವಿಲ್ಲ ಎಂದು ಇಲ್ಲಿನ ಜನರು ಸ್ಪಷ್ಟವಾಗಿ ಹೇಳಿದ್ದಾರೆ' ಎಂದರು.
'ಭಾರತ್ ಜೋಡೊ ಯಾತ್ರೆಯ ವೇಳೆಯೇ ನಾನು ಲಾಡಾಖ್‌ಗೆ ಬರಬೇಕಾಗಿತ್ತು. ಆದರೆ ಕಾರಣಾಂತರಗಳಿಂದ ಇಲ್ಲಿಗೆ ಭೇಟಿ ನೀಡುವ ಯೋಜನೆ ಕೈಬಿಡಬೇಕಾಯಿತು. ಆದ್ದರಿಂದ ಸಂಪೂರ್ಣ ಪ್ರಮಾಣದ ಪ್ರವಾಸ ಕೈಗೊಳ್ಳಲೆಂದು ಈಗ ಇಲ್ಲಿಗೆ ಬಂದಿದ್ದೇನೆ' ಎಂದು ವಿವರಿಸಿದರು.
'ನಾನು ಈಗಾಗಲೇ ಪ್ಯಾಂಗಾಂಗ್‌ಗೆ ಬಂದಿದ್ದೇನೆ. ನಂತರ, ನುಬ್ರಾ ಮತ್ತು ಕಾರ್ಗಿಲ್‌ಗೆ ಭೇಟಿ ನೀಡಲಿದ್ದೇನೆ. ಈ ಪ್ರವಾಸದ ಉದ್ದೇಶವೇನೆಂದರೆ ಇಲ್ಲಿನ ಜನರ ಏನು ಹೇಳುತ್ತಾರೆ ಮತ್ತು ಅವರ ಕಷ್ಟಗಳೇನು ಎಂಬುದನ್ನು ಆಲಿಸುವುದು. ಗೋಮಾಳ ವಶದ ಕುರಿತು ಜನರು ವಿಪರೀತ ಕಳವಳಗೊಂಡಿದ್ದಾರೆ. ಇಲ್ಲಿನ ಮತ್ತೊಂದು ಸಮಸ್ಯೆಯೇನೆಂದರೆ ಸಮರ್ಪಕ ದೂರವಾಣಿ ಸಂಪರ್ಕ ಇಲ್ಲದಿರುವುದು' ಎಂದು ಅವರು ತಮ್ಮ ಅನುಭವ ಹಂಚಿಕೊಂಡರು.