ಕಾಸರಗೋಡು: ವಂದೇಭಾರತ್ ಎಕ್ಸ್‍ಪ್ರೆಸ್ ಮತ್ತು ರಾಜಧಾನಿ ಎಕ್ಸ್‍ಪ್ರೆಸ್ ರೈಲುಗಳ ಮೇಲೆ ಮತ್ತೆ ಕಲ್ಲು ತೂರಾಟ ನಡೆದಿದೆ. ತಿರುವನಂತಪುರ-ನಿಜಾಮುದ್ದೀನ್ ಎಕ್ಸ್‍ಪ್ರೆಸ್ ರೈಲಿಗೆ ಹೊಸದುರ್ಗ ಮತ್ತು ನೀಲೇಶ್ವರ ಮಧ್ಯೆ ಕಲ್ಲು ತೂರಲಾಗಿದ್ದು, ರೈಲಿನ ಬಿ-5ಬೋಗಿಯ ಕಿಟಿಕಿ ಗಾಜಿಗೆ ಹಾನಿಯುಂಟಾಗಿದೆ. ಇನ್ನೊಂದು ಘಟನೆಯಲ್ಲಿ ಕಾಸರಗೋಡಿನಿಂದ ತಿರುವನಂತಪುರಕ್ಕೆ ಸಂಚರಿಸುತ್ತಿದ್ದ ವಂದೇಭಾರತ್ ಎಕ್ಸ್‍ಪ್ರೆಸ್ ರೈಲಿಗೆ ಕಣ್ಣೂರು ಸನಿಹದ ತಾನೂರಿನಲ್ಲಿ ಕಿಡಿಗೇಡಿಗಳು ಕಲ್ಲೆಸೆದಿದ್ದು, ಇದರಿಂದ ಸಿ-11ಬೋಗಿಯ ಕಿಟಿಕಿ ಗಾಜು ಒಡೆದು ಹಾನಿಯುಂಟಾಗಿದೆ. ಪ್ರಯಾಣಿಕರು ಪಾರಾಗಿದ್ದಾರೆ. ಆ. 17ರಂದು ಇದೇ ರೈಲಿಗೆ ಮಾಹೆ ಬಳಿ ಕಲ್ಲೆಸೆತವುಂಟಾಗಿತ್ತು. ಕಳೆದ ಒಂದು ತಿಂಗಳಿನಿಂದ ರೈಲುಗಳಿಗೆ ವ್ಯಾಪಕವಾಗಿ ಕಲ್ಲೆಸೆತ ಹಾಗೂ ರೈಲ್ವೆ ಹಳಿಯಲ್ಲಿ ಕಲ್ಲು, ಕ್ಲೋಸೆಟ್ ಇರಿಸಿ ಬುಡಮೇಲು ಕೃತ್ಯದ ಯತ್ನವೂ ನಡೆದುಬರುತ್ತಿದೆ.
ರೈಲುಗಳ ಮೇಲೆ ಕಲ್ಲೆಸೆತ, ಹಳಿಯಲ್ಲಿ ಕಲ್ಲು, ಕ್ಲೋಸೆಟ್‍ಗಳನ್ನಿರಿಸಿ ಬುಡಮೇಲು ಕೃತ್ಯ ನಡೆಸುತ್ತಿರುವುದರ ಹಿಂದೆ ಸಂಚಿನ ಸಾಧ್ಯತೆ ಬಗ್ಗೆ ರೈಲ್ವೆ ಸುರಕ್ಷಾ ದಳ(ಆರ್‍ಪಿಎಫ್) ಶಂಕೆ ವ್ಯಕ್ತಪಡಿಸಿದೆ. ಮಂಜೇಶ್ವರದಿಂದ ಕೋಯಿಕ್ಕೋಡು ವರೆಗಿನ ನಿಗದಿತ ಪ್ರದೇಶಗಳಲ್ಲಿ ರೈಲುಗಳಿಗೆ ಕಲ್ಲು ತೂರಾಟ ನಡೆಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಡ್ರೋಣ್ ಬಳಸಿ ಆರೋಪಿಗಳ ಪತ್ತೆಗೆ ಪೊಲೀಸರು ಅಗತ್ಯ ಕ್ರಮ ಕೈಗೊಂಡಿದ್ದಾರೆ. ಕಲ್ಲೆಸೆತ ನಡೆಸಿರುವ ಆರೋಪಿಗಳ ವಿರುದ್ಧ ಕನಿಷ್ಠ ಹತ್ತು ವರ್ಷಗಳ ಕಠಿಣ ಜೈಲುಶಿಕ್ಷೆ ಲಭಿಸುವ ರೀತಿಯಲ್ಲಿ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಹೊಸರ್ದು ಠಾಣೆ ಪೊಲೀಸರು ರೈಲ್ವೆ ಹಳಿ ತಪಾಸಣೆ ನಡೆಸುವುದರ ಜತೆಗೆ ಸಂಶಯಾಸ್ಪದ ರೀತಿಯಲ್ಲಿ ಕಂಡುಬಂದ 50ಮಂದಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಡಿಜಿಪಿ ನಿರ್ದೇಶ:
ರೈಲುಗಳ ಮೇಲೆ ಕಲ್ಲು ತೂರಾಟ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಪೊಲೀಸ್ ಮಹಾ ನಿರ್ದೇಶಕ(ಡಿಜಿಪಿ)ಡಾ.ಶೇಖ್ ದರ್ವೇಶ್ ಸಾಹಿಬ್, ಇಂತಹ ಕೃತ್ಯ ತಡೆಗಟ್ಟಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕಠಿಣ ಕ್ರಮಕ್ಕೆ ಮುಂದಾಗುವಂತೆ ನಿರ್ದೇಶ ನೀಡಿದ್ದಾರೆ. ಇದಕ್ಕೆ ರೈಲ್ವೆ ಪೊಲೀಸ್ ಹಾಗೂ ರೈಲ್ವೆ ಸುರಕ್ಷಾ ಪಡೆ ಸಹಾಯ ಪಡೆದುಕೊಳ್ಳುವಂತೆಯೂ ಸೂಚಿಸಿದ್ದಾರೆ.