ಕುಂಬಳೆ: ರಾಜ್ಯ ಸರ್ಕಾರ ಘೋಷಿಸಿದ 14 ಸ್ಮಾರ್ಟ್ ಕೃಷಿ ಭವನಗಳಲ್ಲಿ ಒಂದಾದ ಪುತ್ತಿಗೆ ಕೃಷಿ ಭವನದ ಶಂಕುಸ್ಥಾಪನೆಯನ್ನು ಶಾಸಕ ಎ.ಕೆ.ಎಂ.ಅಶ್ರಫ್ ನೆರವೇರಿಸಿದರು. ಪುತ್ತಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಡಿ.ಸುಬ್ಬಣ್ಣ ಅಧ್ಯಕ್ಷತೆ ವಹಿಸಿದ್ದರು.
ನಬಾರ್ಡ್‍ನ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಧಿಯಿಂದ 2 ಕೋಟಿ ರೂ. ವೆಚ್ಚ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. 2500 ಚದರ ಅಡಿ ಎರಡು ಅಂತಸ್ತಿನ ಕಟ್ಟಡದಲ್ಲಿ ಕೃಷಿ ಭವನ, ಫ್ರಂಟ್ ಆಫೀಸ್, ಇಕೋಶಾಪ್, ಸಸ್ಯ ಆರೋಗ್ಯ ಕೇಂದ್ರ, ಡಿಜಿಟಲ್ ಗ್ರಂಥಾಲಯ, ಸಭಾಂಗಣ, ರೈತರಿಗೆ ಸ್ಮಾರ್ಟ್ ಕಾರ್ಡ್ ವಿತರಣಾ ವ್ಯವಸ್ಥೆ ಮತ್ತು ಅಂಗವಿಕಲರಿಗೆ ವಿಶೇಷ ಸೌಲಭ್ಯ ಕಲ್ಪಿಸಲಾಗುವುದು. ಕೇರಳ ಲ್ಯಾಂಡ್ ಡೆವಲಪ್‍ಮೆಂಟ್ ಕಾರ್ಪೋರೇಷನ್ ಲಿಮಿಟೆಡ್‍ನ ಮೇಲ್ವಿಚಾರಣೆಯಲ್ಲಿ ನಿರ್ಮಾಣವನ್ನು ಮಾಡಲಾಗುತ್ತದೆ.
ಕಾರ್ಯಕ್ರಮದಲ್ಲಿ ಪುತ್ತಿಗೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಜಯಂತಿ, ಕಾಸರಗೋಡು ಪ್ರಧಾನ ಕೃಷಿ ಅಧಿಕಾರಿ ಪಿ.ಮಿನಿ ಜೋನಿನ್, ಪಂಚಾಯತಿ ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಪಾಲಾಕ್ಷ ರೈ, ಅಬ್ದುಲ್ ಮಜೀದ್, ಅನಿತಾ, ಬ್ಲಾಕ್ ಪಂಚಾಯಿತಿ ಸದಸ್ಯೆ ಎಂ.ಚಂದ್ರಾವತಿ, ಗ್ರಾ.ಪಂ. ಸದಸ್ಯರು, ಎಡಿಸಿ ಸದಸ್ಯರು ಮಾತನಾಡಿದರು. ಕೃಷಿ ಸಹಾಯಕ ನಿರ್ದೇಶಕಿ ಪಿ.ವಿ.ಅರ್ಜಿತಾ ಸ್ವಾಗತಿಸಿ, ಕೃಷಿ ಅಧಿಕಾರಿ ದಿನೇಶ ಪೆರುಂಬಳ ವಂದಿಸಿದರು.