ಕಾಸರಗೋಡು: ಆದರ್ಶ ಶಿಕ್ಷಕರಾಗಿ ನಿವೃತ್ತರಾದ ಧಾರ್ಮಿಕ ಶ್ರದ್ಧಾ ಕೇಂದ್ರ ಎಡನೀರು ಶ್ರೀ ಮಠದಲ್ಲಿ ಪ್ರಬಂಧಕರಾಗಿ ಸೇವೆ ಸಲ್ಲಿಸುತ್ತಿರುವ ರಾಜೇಂದ್ರ ಕಲ್ಲೂರಾಯ ಅವರ ಸಪ್ತತಿ ಸಮಾರಂಭ ಶ್ರೀ ಎಡನೀರು ಮಠದಲ್ಲಿ ಜರುಗಿತು.
ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರ ಮೂರನೇ ವರ್ಷದ ಚಾತುರ್ಮಾಸ್ಯ ಸಮಾರಂಭದ ಸಂದರ್ಭ ಸಪ್ತತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರು ರಾಜೇಂದ್ರ ಕಲ್ಲೂರಾಯ ದಂಪತಿಯನ್ನು ಶಾಲುಹೊದಿಸಿ, ಸ್ಮರಣಿಕೆ ನೀಡಿ ಹರಸಿದರು. ಉದುಮ ಶಾಸಕ ಸಿ.ಎಚ್ ಕುಞಂಬು ಧ್ಯಕ್ಷತೆ ವಹಿಸಿ ಮಾತನಾಡಿ, ಉತ್ತಮ ಶಿಕ್ಷಕರಾಗಿ ನಿವೃತ್ತರಾದ ರಾಜೇಂದ್ರ ಕಲ್ಲೂರಾಯ ಅವರು ಶ್ರೀಮಠದಲ್ಲಿ ಪ್ರಬಂಧಕರಾಗಿ ಸಲ್ಲಿಸುತ್ತಿರುವ ಸೇವೆ ಶ್ಲಾಘನೀಯ. ಅವರ ಸೇವಾವಧಿಯಲ್ಲಿ ಶ್ರೀಮಠ ಮತ್ತಷ್ಟು ಪುರೋಗತಿ ಕಾಣಲಿ ಎಂದು ತಿಳಿಸಿದರು.
ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಡಾ. ಟಿ.ಶ್ಯಾಮ ಭಟ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಹಿರಿಯ ಯಕ್ಷಗಾನ ಕಲಾವಿದ ಡಾ.ಪ್ರಭಾಕರ ಜ್ಯೋಷಿ ಅಭಿನಂದನಾ ಭಾಷಣ ಮಾಡಿದರು. . ಡಾ. ಶ್ರೀಪತಿ ಕಲ್ಲೂರಾಯ ಸ್ವಾಗತಿಸಿದರು. ಶ್ರೀ ರಾಜಾರಾಮ ಪೆರ್ಲ ಅಭಿನಂದನಾ ಪಲಕ ವಾಚಿಸಿದರು. ಹಿರಣ್ಯ ವೆಂಕಟೇಶ್ವರ ಭಟ್ ಕಾರ್ಯಕ್ರಮ ನಿರೂಪಿಸಿದರು. ಸೂರ್ಯ ಭಟ್ ಎಡನೀರು ವಂದಿಸಿದರು.
ಈ ಸಂದರ್ಭ ಶಾಲಾ ಹಳೇ ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಶಿಕ್ಷಕಗೆ ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ನಂತರ ಯಜ್ಞೆಷ್ ಆಚಾರ್ಯ ಸುಬ್ರಹ್ಮಣ್ಯ ಅವರಿಂದ ದಾಸವಾಣಿ ಹಾಗೂ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಗುರುದಕ್ಷಿಣೆ ಎಂಬ ಯಕ್ಷಗಾನ ಬಯಲಾಟ ಜರಗಿತು.