ನವದೆಹಲಿ: ಅವಿಶ್ವಾಸ ನಿರ್ಣಯ ಕುರಿತ ಚರ್ಚೆ ವೇಳೆ 'ಪದೇಪದೇ ಅಶಿಸ್ತಿನ ವರ್ತನೆ' ತೋರಿದ್ದಕ್ಕಾಗಿ ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಅವರನ್ನು ಗುರುವಾರ ಅಮಾನತುಗೊಳಿಸಲಾಗಿದೆ.
'ತನ್ನ ಸದನ ನಾಯಕನ ವಿರುದ್ಧ ಪ್ರಜಾಪ್ರಭುತ್ವ ವಿರೋಧಿ ಹಾಗೂ ನಂಬಲಸಾಧ್ಯವಾದ ಕ್ರಮ ಕೈಗೊಳ್ಳಲಾಗಿದೆ' ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
'ಅವಿಶ್ವಾಸ ನಿರ್ಣಯ ಕುರಿತು ಪ್ರಧಾನಿ ನರೇಂದ್ರ ಮೋದಿ ಹಾಗೂ ಸಚಿವರು ಮಾತನಾಡುತ್ತಿದ್ದ ವೇಳೆ ಪದೇಪದೇ ಕಲಾಪಕ್ಕೆ ಅಡ್ಡಿಪಡಿಸುತ್ತಿರುವ ಅಧೀರ್ ರಂಜನ್ ಚೌಧರಿ ಅವರನ್ನು ಅಮಾನತು ಮಾಡಬೇಕು' ಎಂಬ ನಿರ್ಣಯನ್ನು ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಮಂಡಿಸಿದರು.
'ಹಕ್ಕುಬಾಧ್ಯತಾ ಸಮಿತಿ ಈ ಕುರಿತು ತನಿಖಾ ವರದಿ ಸಲ್ಲಿಸುವ ವರೆಗೆ ಅಧೀರ್‌ರಂಜನ್ ಚೌಧರಿ ಅವರನ್ನು ಸದನದ ಕಾರ್ಯಕಲಾಪಗಳಿಂದ ಅಮಾನತುಗೊಳಿಸಲಾಗುವುದು' ಎಂಬ ಅಂಶವನ್ನು ಒಳಗೊಂಡಿರುವ ನಿರ್ಣಯವನ್ನು ಧ್ವನಿಮತದ ಮೂಲಕ ಅಂಗೀಕರಿಸಲಾಯಿತು.
ಇದಕ್ಕೂ ಮುನ್ನ, 'ಕಲಾಪಕ್ಕೆ ಅಡ್ಡಿಪಡಿಸುವುದು ಅವರಿಗೆ ಅಭ್ಯಾಸವಾಗಿ ಬಿಟ್ಟಿರುವುದು ದುರಾದೃಷ್ಟಕರ. ಅವರು ಈ ಸದನದಲ್ಲಿಯೇ ದೊಡ್ಡ ವಿರೋಧ ಪಕ್ಷವಾದ ಕಾಂಗ್ರೆಸ್‌ನ ನಾಯಕ. ಮೇಲಿಂದ ಮೇಲೆ ಎಚ್ಚರಿಕೆ ನೀಡಿದ್ದರೂ ಅವರು ತಮ್ಮ ವರ್ತನೆಯನ್ನು ಸುಧಾರಿಸಿಕೊಳ್ಳಲಿಲ್ಲ' ಎಂದು ಜೋಶಿ ಹೇಳಿದರು.
'ಯಾವಾಗಲೂ ಅವರು ಆಧಾರರಹಿತ ಆರೋಪಗಳನ್ನು ಮಾಡುತ್ತಾರಲ್ಲದೇ, ಸರ್ಕಾರದ ಘನತೆಯನ್ನು ಕುಗ್ಗಿಸಲು ಪ್ರಯತ್ನಿಸುತ್ತಾರೆ. ಅವರ ವಾದಗಳಲ್ಲಿ ಯಾವುದೇ ಹುರುಳಿಲ್ಲ ಹಾಗೂ ಅವರು ತಮ್ಮ ತಪ್ಪಿಗೆ ಎಂದಿಗೂ ಕ್ಷಮೆ ಕೇಳುವುದಿಲ್ಲ. ಈ ದಿನ ಗೃಹ ಸಚಿವರು ಮಾತನಾಡುವ ವೇಳೆ ಅವರು ಎಂದಿನಂತೆಯೇ ವರ್ತಿಸಿದರು' ಎಂದರು.
ಈ ಕುರಿತು ಮಾತನಾಡಿದ ಲೋಕಸಭೆಯಲ್ಲಿ ಕಾಂಗ್ರೆಸ್‌ನ ಸಚೇತಕ ಮಾಣಿಕಂ ಟ್ಯಾಗೋರ್, 'ಪ್ರಧಾನಿ ವಿರುದ್ಧ ಮಾತನಾಡಿದ್ದಕ್ಕಾಗಿ ಇದೇ ಮೊದಲ ಬಾರಿಗೆ ಲೋಕಸಭೆಯಲ್ಲಿ ದೊಡ್ಡ ವಿರೋಧಪಕ್ಷವಾದ ಕಾಂಗ್ರೆಸ್‌ನ ನಾಯಕ ಅಧೀರ್ ರಂಜನ್ ಚೌಧರಿ ಅವರನ್ನು ಅಮಾನತುಗೊಳಿಸಲಾಗಿದೆ. ಇದನ್ನು ನಂಬಲು ಆಗುತ್ತಿಲ್ಲ. ಈ ಕ್ರಮ ಪ್ರಜಾಪ್ರಭುತ್ವ ವಿರೋಧಿಯಾಗಿದ್ದು, ಸರ್ವಾಧಿಕಾರ ಧೋರಣೆಯನ್ನು ಖಂಡಿಸುತ್ತೇನೆ' ಎಂದರು.
ಅಶಿಸ್ತಿನ ವರ್ತನೆ ತೋರಿದ್ದಕ್ಕಾಗಿ ಬಿಜೆಪಿ ಸಂಸದ ವೀರೇಂದ್ರ ಸಿಂಗ್ ಅವರಿಗೆ ಸ್ಪೀಕರ್ ಎಚ್ಚರಿಕೆ ನೀಡಿದರು. ನಂತರ ಅವರು ಕ್ಷಮೆ ಯಾಚಿಸಿದರು.