ನವದೆಹಲಿ: 'ದ್ವೇಷ ಭಾಷಣ ಮಾಡುವವರು ಯಾರೇ ಇರಲಿ ಅವರ ವಿರುದ್ಧ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು. ಈ ವಿಷಯದಲ್ಲಿ ಎಲ್ಲ ಕಡೆಯವರನ್ನು ಒಂದೇ ರೀತಿ ಪರಿಗಣಿಸಬೇಕು' ಎಂದು ಸುಪ್ರೀಂಕೋರ್ಟ್ ಶುಕ್ರವಾರ ಹೇಳಿದೆ.
'ತೆಹಸೀನ್ ಪೂನಾವಾಲಾ ಪ್ರಕರಣದಲ್ಲಿ ನೀಡಲಾಗಿರುವ ಮಾರ್ಗಸೂಚಿಗಳ ಪಾಲನೆಯಾಗುತ್ತಿದೆ ಎಂಬ ಭರವಸೆ ಇದೆ' ಎಂದು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಹಾಗೂ ಎಸ್.ವಿ.ಎನ್.ಭಟ್ಟಿ ಅವರಿದ್ದ ನ್ಯಾಯಪೀಠ ಹೇಳಿತು.
ನೂಹ್ ಜಿಲ್ಲೆಯಲ್ಲಿ ನಡೆದ ಕೋಮು ಹಿಂಸಾಚಾರ ನಂತರ ಮುಸ್ಲಿಮರನ್ನು ಬಹಿಷ್ಕರಿಸುವಂತೆ ಕರೆ ನೀಡಿದ್ದ ಕೆಲ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನು ನ್ಯಾಯಪೀಠ ನಡೆಸಿತು.
ವಿಚಾರಣೆ ವೇಳೆ, ಅರ್ಜಿದಾರರೊಬ್ಬರ ಪರ ಹಾಜರಿದ್ದ ವಕೀಲ ಮಾತನಾಡಿ, 'ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ರ‍್ಯಾಲಿಯಲ್ಲಿ ದ್ವೇಷ ಭಾಷಣ ಮಾಡಲಾಗಿದೆ. ಹಿಂದೂಗಳನ್ನು ಹತ್ಯೆ ಮಾಡುತ್ತೇವೆ ಎಂಬ ಘೋಷಣೆಗಳನ್ನು ಕೂಗಲಾಗಿದೆ' ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ, ಕೇರಳ ಮೂಲದ ಶಾಹೀನ್ ಅಬ್ದುಲ್ಲಾ ಪರ ವಕೀಲ ನಿಜಾಮ್ ಪಾಷಾ, 'ದ್ವೇಷ ಭಾಷಣಕ್ಕೆ ಯಾವುದೇ ಬಣ ಇಲ್ಲ. ನಾವೆಲ್ಲರೂ ಒಂದೇ ಕಡೆ ಇದ್ದೇವೆ' ಎಂದರು.
'ಈ ವಿಷಯದಲ್ಲಿ ನಾವು ಸ್ಪಷ್ಟವಾಗಿದ್ದೇವೆ. ಆ ಕಡೆಯವರಾಗಲಿ ಅಥವಾ ಈ ಕಡೆಯವರಾಗಲಿ ಎಲ್ಲರನ್ನೂ ಒಂದೇ ರೀತಿ ಪರಿಗಣಿಸಬೇಕು. ದ್ವೇಷ ಭಾಷಣ ಮಾಡುವವರು ಯಾರೇ ಇರಲಿ ಅವರ ವಿರುದ್ಧ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ಈಗಾಗಲೇ ಹೇಳಿದ್ದೇವೆ. ಈ ಮಾತನ್ನು ಮತ್ತೊಮ್ಮೆ ಹೇಳುವ ಅಗತ್ಯ ಇಲ್ಲ ಎನಿಸುತ್ತದೆ' ಎಂದು ನ್ಯಾಯಮೂರ್ತಿ ಖನ್ನಾ ಹೇಳಿದರು.
ಐಯುಎಂಎಲ್ ರ‍್ಯಾಲಿ ಕುರಿತು ಪ್ರಸ್ತಾಪಿಸಿದ್ದ ವಕೀಲ ಇದಕ್ಕೆ ಪ್ರತಿಕ್ರಿಯಿಸಿ, 'ಐಯುಎಂಎಲ್ ರ‍್ಯಾಲಿಯ ಕುರಿತ ಸಂಪೂರ್ಣ ಮಾಹಿತಿಯನ್ನು ಪಾಷಾ ಅವರು ನ್ಯಾಯಾಲಯದ ಮುಂದೆ ಇಡುತ್ತಿಲ್ಲ' ಎಂದರು.
ನಂತರ ನಡೆದ ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಪೀಠ, ವಿಚಾರಣೆಯನ್ನು ಮುಂದಿನ ಶುಕ್ರವಾರಕ್ಕೆ ಮುಂದೂಡಿತು.