ಕಾಸರಗೋಡು: ಓಣಂ ಹಬ್ಬದ ಅಂಗವಾಗಿ ಮಾರುಕಟ್ಟೆಗಳಲ್ಲಿ ಸಾಮಗ್ರಿಗಳ ದರ, ಅಳತೆ ಮತ್ತು ತೂಕಗಳಿಗೆ ಸಂಬಂಧಿಸಿ ಜಿಲ್ಲಾದ್ಯಂತ ವ್ಯಾಪಕ ಕಾರ್ಯಾಚರಣೆ ನಡೆಸಲಾಗುತ್ತಿದೆ. ತಾಲೂಕಿನ ಹೊಸದುರ್ಗ ತಾಲೂಕಿನಲ್ಲಿ ಸಹಾಯಕ ಜಿಲ್ಲಾಧಿಕಾರಿ ದಿನೇಶ್ ಕುಮಾರ್ ನೇತೃತ್ವದಲ್ಲಿ ಸುಮಾರು 40 ಅಂಗಡಿಗಳಲ್ಲಿ ಜಂಟಿ ತಪಾಸಣೆ ನಡೆಸಲಾಯಿತು. ಪರಿಶೀಲನೆಯಲ್ಲಿ ತಾಲೂಕು ಸರಬರಾಜು ಅಧಿಕಾರಿ ಕೆ.ಎನ್.ಬಿಂದು, ಕಂದಾಯ ನಿರೀಕ್ಷಕರಾದ ಶಶಿಧರನ್, ಜಿಲ್ಲಾ ತೂಕ ಮತ್ತು ಅಳತೆ ಇಲಾಖೆ ನಿರೀಕ್ಷಕ ಸೈಫುದ್ದೀನ್ ಉಪಸ್ಥಿತರಿದ್ದರು. ತರಕಾರಿ ಅಂಗಡಿ, ಚಿಕನ್ ಅಂಗಡಿ, ದಿನಸಿ, ಬೇಕರಿ, ಸಪ್ಲೈಕೋ ಸೂಪರ್‍ಮಾರ್ಕೆಟ್, ಮಾವೇಲಿ ಅಂಗಡಿ, ಒಣಮೀನಿನ ಅಂಗಡಿ, ಹೋಟೆಲ್‍ಗಳಲ್ಲಿ ತಪಾಸಣೆ ನಡೆಸಿದರು. ತರಕಾರಿ, ಮಾಂಸದ ಕೋಳಿ, ಜಿನಸು ಸಾಮಗ್ರಿ ಸೇರಿದಂತೆ ಎಲ್ಲ ಸಾಮಗ್ರಿಗಳ ದರಪಟ್ಟಿ ಪ್ರದರ್ಶಿಸುವಂತೆ ಜಿಲ್ಲಾಧಿಕಾರಿ ನೀಡಿದ್ದ ಆದೇಶವನ್ನೂ ಕೆಲವು ಅಂಗಡಿಗಳು ಪಾಲಿಸದಿರುವುದನ್ನು ತಪಾಸಣೆ ಸಂದರ್ಭ ಪತ್ತೆಹಚ್ಚಲಾಗಿದೆ. ದರಪಟ್ಟಿ ಪ್ರದರ್ಶಿಸದ ಮೂರು ಅಂಗಡಿಗಳಿಗೆ ಅಧಿಕಾರಿಗಳು ನೋಟೀಸು ಜಾರಿಗೊಳಿಸಿದರು.