ನವದೆಹಲಿ: ಮಗು ಹೆರುವ ಆಯ್ಕೆಯ ಹಕ್ಕು ಮಹಿಳೆಯದ್ದೇ ಆಗಿದ್ದು, ಈ ವಿಷಯದಲ್ಲಿ ಸರ್ಕಾರದ ಹಸ್ತಕ್ಷೇಪ ಅನಗತ್ಯ. ಇಲ್ಲಿ ಮಾನವನ ಘನತೆಯನ್ನು ಪ್ರಮುಖವಾಗಿ ಪರಿಗಣಿಸಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ.
ನವದೆಹಲಿ: ಮಗು ಹೆರುವ ಆಯ್ಕೆಯ ಹಕ್ಕು ಮಹಿಳೆಯದ್ದೇ ಆಗಿದ್ದು, ಈ ವಿಷಯದಲ್ಲಿ ಸರ್ಕಾರದ ಹಸ್ತಕ್ಷೇಪ ಅನಗತ್ಯ. ಇಲ್ಲಿ ಮಾನವನ ಘನತೆಯನ್ನು ಪ್ರಮುಖವಾಗಿ ಪರಿಗಣಿಸಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ.
ಅತ್ಯಾಚಾರ ಸಂತ್ರಸ್ತೆಯೊಬ್ಬರ 27 ವಾರಗಳ ಭ್ರೂಣದ ಗರ್ಭಪಾತಕ್ಕೆ ಅನುಮತಿ ನೀಡಿ ಸೋಮವಾರ ಹೊರಡಿಸಿರುವ ಆದೇಶದಲ್ಲಿ ಸುಪ್ರೀಂಕೋರ್ಟ್ ಇದನ್ನು ಹೇಳಿದೆ.
ಗರ್ಭಪಾತಕ್ಕೆ ಅವಕಾಶ ನಿರಾಕರಿಸಿದ್ದ ಗುಜರಾತ್ ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ 25 ವರ್ಷದ ಸಂತ್ರಸ್ತೆ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನಾ ಮತ್ತು ಉಜ್ಜಲ್ ಭುಯಾನ್ ಅವರಿದ್ದ ನ್ಯಾಯಪೀಠ ವಿಚಾರಣೆ ನಡೆಸಿತ್ತು.
'ಗರ್ಭಪಾತಕ್ಕೆ ಒಳಗಾಗುವ ಕುರಿತು ನಿರ್ಣಯಿಸುವುದು ಸೇರಿದಂತೆ ಸಂತಾನೋತ್ಪತ್ತಿಗೆ ಸಂಬಂಧಿಸಿ ನಿರ್ಧಾರ ಕೈಗೊಳ್ಳುವ ಅಧಿಕಾರ ಮತ್ತು ಸಾಮರ್ಥ್ಯವನ್ನು ಮಹಿಳೆ ಹೊಂದಿದ್ದಾಳೆ ಎಂದು ಪರಿಗಣಿಸುವುದು ಕೂಡ ಘನತೆ ಹಕ್ಕಿನ ಭಾಗವೇ ಆಗಿದೆ' ಎಂದು ನ್ಯಾಯಪೀಠ ಹೇಳಿದೆ.
'ಸಂತಾನೋತ್ಪತ್ತಿ ಅಥವಾ ಭಾವನಾತ್ಮಕ ಮತ್ತು ದೈಹಿಕ ಸ್ವಾಸ್ಥ್ಯಕ್ಕೆ ಸಂಬಂಧಿಸಿದ ಆರೋಗ್ಯಸೇವೆಯಿಂದ ವಂಚಿತಳನ್ನಾಗಿ ಮಾಡುವುದು ಕೂಡ ಮಹಿಳೆಯ ಘನತೆಗೆ ಧಕ್ಕೆ ತರಲಿದೆ' ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ಹೇಳಿದೆ.
'ವೈದ್ಯಕೀಯ ಗರ್ಭಪಾತವು ಸಂತ್ರಸ್ತ ಮಹಿಳೆಯ ಗರ್ಭಧಾರಣೆ ಸಾಮರ್ಥ್ಯ ಹಾಗೂ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದಿಲ್ಲ ಎಂಬುದಾಗಿ ವೈದ್ಯಕೀಯ ಮಂಡಳಿ ನೀಡಿದ್ದ ವರದಿಯನ್ನು ಗುಜರಾತ್ ಹೈಕೋರ್ಟ್ ಪರಿಗಣಸದಿದ್ದುದು ಸರಿಯಲ್ಲ' ಎಂದು ನ್ಯಾಯಪೀಠ ಹೇಳಿದೆ.