ಬೆಂಗಳೂರು: ಶಸ್ತ್ರಾಸ್ತ್ರಗಳು, ಬಾಹ್ಯಾಕಾಶ ತಂತ್ರಜ್ಞಾನವನ್ನು ರಫ್ತು ಮಾಡುವ ಹಂತಕ್ಕೆ ಭಾರತ ಬೆಳೆದಿದೆ. ಮುಂದಿನ ಒಂದು ದಶಕದವರೆಗೆ ಸ್ಥಳೀಯ ಶಸ್ತ್ರಾಸ್ತ್ರ ಅಭಿವೃದ್ಧಿ ಮತ್ತು ರಫ್ತಿಗಾಗಿ ಮಾರ್ಗಸೂಚಿ ರಚಿಸಲಾಗಿದೆ ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ವಿದ್ಯುನ್ಮಾನ ಮತ್ತು ಸಂವಹನ ವಿಭಾಗದ ನಿರ್ದೇಶಕ ಬಿ.ಕೆ. ದಾಸ್ ಹೇಳಿದರು.
ನಗರದಲ್ಲಿ ಶನಿವಾರ ಜಿ-20 'ಡಿಜಿಟಲ್ ಇನ್ನೋವೇಷನ್ ಅಲಯನ್ಸ್' (ಡಿಐಎ) ಶೃಂಗಸಭೆಯ ನಂತರ ಅವರು ಮಾತನಾಡಿದರು.
ದೇಶದ ರಫ್ತು ಪ್ರಮಾಣ ಕಡಿಮೆ ಇದ್ದರೂ, ಸಾಮಗ್ರಿಗಳ ತಯಾರಿಕೆಯಲ್ಲಿ ಸ್ವಾವಲಂಬನೆ ಸಾಧಿಸಲಾಗಿದೆ. ಈಗ ರಫ್ತು ಮಾಡುವ ಮಟ್ಟಕ್ಕೆ ಬೆಳೆಯುತ್ತಿರುವುದು ಮಹತ್ವದ ಸಾಧನೆ. ರಷ್ಯಾ, ಇಸ್ರೇಲ್ ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಒಪ್ಪಂದಕ್ಕೆ ಅಮೆರಿಕವೂ ಉತ್ಸುಕವಾಗಿದೆ. ಭಾರತದಲ್ಲಿ ತಯಾರಾಗುವ ಶಸ್ತ್ರಾಸ್ತ್ರಗಳಿಗೆ ಆಫ್ರಿಕಾ, ಮಧ್ಯಪ್ರಾಚ್ಯ, ದಕ್ಷಿಣ ಅಮೆರಿಕ ದೇಶಗಳಲ್ಲಿ ಹೆಚ್ಚಿನ ಬೇಡಿಕೆಯಿದೆ. ಅತ್ಯಾಧುನಿಕ ರೆಡಾರ್‌ಗಳು, ವಿದ್ಯುನ್ಮಾನ ಯುದ್ಧ ವ್ಯವಸ್ಥೆಗಳು, ಸಂವಹನ ವ್ಯವಸ್ಥೆಗಳು ಹಾಗೂ ಜಾಮರ್‌ಗಳಂತಹ ಸಲಕರಣೆಗಳ ನಿರ್ಮಾಣ ಸಾಧ್ಯವಾಗಿದೆ ಎಂದರು.
ವಿದೇಶಗಳಿಂದ ತಂತ್ರಜ್ಞಾನದ ನೆರವು ಪಡೆದರೂ, ಸಂಪೂರ್ಣ ಭಿನ್ನವಾದ ಸ್ವದೇಶಿ ವಿನ್ಯಾಸಕ್ಕೆ ಒತ್ತು ನೀಡಲಾಗಿದೆ. ಅಭಿವೃದ್ಧಿಶೀಲ ದೇಶಗಳಿಗೆ ರಫ್ತು ಮಾಡುವುದರ ಜತೆಗೆ ಡಿಆರ್‌ಡಿಒ ಹಲವು ದೇಶಗಳೊಂದಿಗೆ ಸಹಯೋಗ ಹೊಂದಿದೆ. ಇತರೆ ದೇಶಗಳ ಶಸ್ತ್ರಾಸ್ತ್ರ ಬೇಡಿಕೆಯನ್ನು 45 ದಿನಗಳಲ್ಲಿ ಪೂರೈಸಲಾಗಿದೆ. ನೈಜೀರಿಯಾ, ಬ್ರೆಜಿಲ್‌ನಂತಹ ದೇಶಗಳು ಭಾರತದ ಸಹಕಾರದಲ್ಲಿ ತಮ್ಮ ವ್ಯವಸ್ಥೆಯನ್ನು ಸಂಪೂರ್ಣವಾಗಿ ಬದಲಿಸಿಕೊಳ್ಳುತ್ತಿವೆ. ಆಧುನೀಕರಣಕ್ಕೆ ತೆರೆದುಕೊಳ್ಳುತ್ತಿವೆ ಎಂದು ಹೇಳಿದರು.