ನವದೆಹಲಿ: ಕೋಚಿಂಗ್ ಕೇಂದ್ರಗಳನ್ನು ಶಾಲೆಗಳು ಮತ್ತು ಕಾಲೇಜುಗಳೊಂದಿಗೆ ಜೋಡಿಸುವಂತೆ ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಬುಧವಾರ ತಿರಸ್ಕರಿಸಿದ ದೆಹಲಿ ಹೈಕೋರ್ಟ್, ಇದನ್ನು ತಪ್ಪು ಗ್ರಹಿಕೆಯಿಂದ ಕೂಡಿರುವ ಪಿಐಎಲ್ ಎಂದು ಹೇಳಿದೆ.
ನವದೆಹಲಿ: ಕೋಚಿಂಗ್ ಕೇಂದ್ರಗಳನ್ನು ಶಾಲೆಗಳು ಮತ್ತು ಕಾಲೇಜುಗಳೊಂದಿಗೆ ಜೋಡಿಸುವಂತೆ ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಬುಧವಾರ ತಿರಸ್ಕರಿಸಿದ ದೆಹಲಿ ಹೈಕೋರ್ಟ್, ಇದನ್ನು ತಪ್ಪು ಗ್ರಹಿಕೆಯಿಂದ ಕೂಡಿರುವ ಪಿಐಎಲ್ ಎಂದು ಹೇಳಿದೆ.
ಈ ಕುರಿತು ನೀತಿ ರೂಪಿಸುವಂತೆ ನ್ಯಾಯಾಲಯವು ಸರ್ಕಾರಕ್ಕೆ ನಿರ್ದೇಶಿಸಲು ಸಾಧ್ಯವಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ, ನ್ಯಾಯಮೂರ್ತಿ ಸಂಜೀವ್ ನರುಲಾ ಅವರ ಪೀಠ ತಿಳಿಸಿದೆ.
'ಕೋಚಿಂಗ್ ಕೇಂದ್ರಗಳನ್ನು ಶಾಲೆ ಮತ್ತು ಕಾಲೇಜುಗಳ ಜತೆ ಸಂಪರ್ಕಿಸುವಂತೆ ಮತ್ತು ಪಾಲುದಾರರನ್ನಾಗಿ ಮಾಡುವಂತೆ ನೀತಿ ರೂಪಿಸಲು ನ್ಯಾಯಾಲಯವು ಸರ್ಕಾರಕ್ಕೆ ನಿರ್ದೇಶನ ನೀಡಲು ಆಗದು. ಇದು ತಪ್ಪು ಗ್ರಹಿಕೆಯಿಂದ ಕೂಡಿದ ಅರ್ಜಿಯಾಗಿದ್ದು, ವಜಾಗೊಳಿಸಲಾಗಿದೆ' ಎಂದು ಪೀಠ ಹೇಳಿದೆ.
'ಪ್ರತಿ ವಿದ್ಯಾರ್ಥಿಯೂ ಕೋಚಿಂಗ್ ಕೇಂದ್ರಕ್ಕೆ ಹಾಜರಾಗುವುದು ಕಡ್ಡಾಯವಲ್ಲ. ಅದು ಐಚ್ಛಿಕ' ಎಂದು ಇದೇ ವೇಳೆ ತಿಳಿಸಿದೆ.
ದೆಹಲಿ ಸರ್ಕಾರದ ಪರವಾಗಿ ಹಾಜರಾಗಿದ್ದ ವಕೀಲ ಸಂತೋಷ್ ಕುಮಾರ್ ತ್ರಿಪಾಠಿ ಅವರು, ಅರ್ಜಿದಾರರ ಮನವಿಯಂತೆ ಕೋಚಿಂಗ್ ಕೇಂದ್ರಗಳನ್ನು ಶಾಲೆ, ಕಾಲೇಜುಗಳ ಜತೆ ಸಂಪರ್ಕಿಸುವಂತೆ ಮಾಡಿದರೆ, ಅದು ಹೊಸ ಬಗೆಯ ಶೋಷಣೆಗೆ ದಾರಿ ಮಾಡಿಕೊಡುತ್ತದೆ ಎಂದು ವಾದಿಸಿದರು.
ಅರ್ಜಿದಾರ ಗಿರೀಶ್ ಕುಮಾರಿ ಗುಪ್ತಾ ಅವರು, 'ಕೋಚಿಂಗ್ ಕೇಂದ್ರಗಳು ಸಮನಾಂತರ ಶಿಕ್ಷಣ ವ್ಯವಸ್ಥೆಯಾಗಿ ಕಾರ್ಯ ನಿರ್ವಹಿಸುತ್ತಿವೆ. ಆದರೆ ಅವುಗಳು ಕಾನೂನುಬದ್ಧವಾಗಿಲ್ಲ. ಇದರಿಂದ ಅಂತಿಮವಾಗಿ ವಿದ್ಯಾರ್ಥಿಗಳ ಏಳಿಗೆಗೆ ಹಾನಿಯಾಗುತ್ತದೆ' ಎಂದು ಅರ್ಜಿಯಲ್ಲಿ ಪ್ರತಿಪಾದಿಸಿದ್ದಾರೆ.
'ಕೋಚಿಂಗ್ ಕೇಂದ್ರಗಳನ್ನು ಶಾಲೆ, ಕಾಲೇಜುಗಳ ಜತೆ ಜೋಡಿಸಿದರೆ, ಅವುಗಳನ್ನು ಕಾನೂನುಬದ್ಧಗೊಳಿಸಲು ಸರ್ಕಾರಕ್ಕೆ ಸಾಧ್ಯವಾಗುತ್ತದೆ. ಕೋಚಿಂಗ್ ಕೇಂದ್ರಗಳು ನೋಂದಣಿ ಮಾಡಿಸಬೇಕಾಗುತ್ತದೆ. ಇದರಿಂದ ಸರ್ಕಾರಕ್ಕೆ ಆದಾಯವೂ ಬರುತ್ತದೆ' ಎಂದು ಅರ್ಜಿಯಲ್ಲಿ ಕೋರಲಾಗಿದೆ.