ವಾಷಿಂಗ್ಟನ್ /ಲಂಡನ್: ಅಮೆರಿಕದ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಹಾಗೂ ಅಧ್ಯಕ್ಷ ಸ್ಥಾನದ ಸ್ಪರ್ಧಿ ಡೊನಾಲ್ಡ್ ಟ್ರಂಪ್ ಜೊತೆಗೆ ಕೈಜೋಡಿಸುವ ಇಂಗಿತವನ್ನು ಭಾರತ ಮೂಲದ ಅಮೆರಿಕದ ಸಂಸದ ವಿವೇಕ್ ರಾಮಸ್ವಾಮಿ ಶನಿವಾರ ವ್ಯಕ್ತಪಡಿಸಿದ್ದಾರೆ.
ಅಧ್ಯಕ್ಷ ಸ್ಥಾನ ಹೊರತುಪಡಿಸಿ ಇತರೆ ಯಾವುದೇ ಜವಾಬ್ದಾರಿ ಕುರಿತು 'ತಮಗೆ ಆಸಕ್ತಿಯಿಲ್ಲ' ಎಂದು ಬಯೊಟೆಕ್ ಕ್ಷೇತ್ರದ ಉದ್ಯಮಿ, 38 ವರ್ಷ ವಯಸ್ಸಿನ ವಿವೇಕ್ ರಾಮಸ್ವಾಮಿ ಈ ಹಿಂದೆ ಹೇಳಿದ್ದರು ಎಂಬುದನ್ನು ಈ ಕುರಿತ ಮಾಧ್ಯಮ ವರದಿ ಉಲ್ಲೇಖಿಸಿದೆ.
'ಅಧ್ಯಕ್ಷನಾಗಿ ರಾಷ್ಟ್ರವನ್ನು ಒಗ್ಗೂಡಿಸಬಹುದು ಎಂದು ನಾನು ಭಾವಿಸಿದ್ದೇನೆ. ಆದರೆ, 77 ವರ್ಷ ವಯಸ್ಸಿನ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಉಪಾಧ್ಯಕ್ಷನಾಗಿ ಕೈಜೋಡಿಸುವ ಅವಕಾಶವನ್ನು ತಳ್ಳಿಹಾಕುವುದಿಲ್ಲ' ಎಂದು ರಾಮಸ್ವಾಮಿ ಹೇಳಿದ್ದಾರೆ.
ಟ್ರಂಪ್ ನೇತೃತ್ವದಲ್ಲಿ ಉಪಾಧ್ಯಕ್ಷನಾಗುವುದು ನಿಮಗೆ ಸಂತಸ ನೀಡಲಿದೆಯೇ ಎಂಬ ಪ್ರಶ್ನೆಗೆ, 'ಖಂಡಿತವಾಗಿ. ನನ್ನ ವಯಸ್ಸಿಗೆ ಅದು ಸೂಕ್ತವಾದ ಸ್ಥಾನವೂ ಹೌದು' ಎಂದು ಅವರು ಹೇಳಿದ್ದಾರೆ.
'ಈಗ ರಾಷ್ಟ್ರವನ್ನು ಪುನಶ್ಚೇತನಗೊಳಿಸುವ ಪ್ರಶ್ನೆ ಇದೆ. ಇದನ್ನು ನಾನು ಶ್ವೇತಭವನದಿಂದ ನಾಯಕನಾಗಿ, ಅಭಿಯಾನದ ಮುಖ್ಯಸ್ಥನಾಗಿಯಷ್ಟೇ ಕಾರ್ಯಗತಗೊಳಿಸಬಹುದು' ಎಂದು ಹೇಳಿದ್ದಾರೆ.