ನವದೆಹಲಿ: ನ್ಯಾಯಾಂಗ ನಿಂದನೆ ಹಾಗೂ ಇತರ ಪ್ರಕರಣಗಳಲ್ಲಿ ಅಧಿಕಾರಿಗಳು ನ್ಯಾಯಾಲಯಗಳಿಗೆ ಹಾಜರಾಗುವುದಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರವು ಪ್ರಮಾಣಿತ ಕಾರ್ಯಾಚರಣೆ ವಿಧಾನ (ಎಸ್‌ಒಪಿ) ಕುರಿತು ಪ್ರಸ್ತಾವ ಮುಂದಿಟ್ಟಿದೆ.
ವಿಶೇಷ ಸಂದರ್ಭಗಳಲ್ಲಿ ಮಾತ್ರ ನ್ಯಾಯಾಲಯಗಳು ತನ್ನ ಮುಂದೆ ಹಾಜರಾಗುವಂತೆ ಅಧಿಕಾರಿಗಳಿಗೆ ಸೂಚಿಸಬೇಕು.
ಅಧಿಕಾರಿಗಳು ಖುದ್ದಾಗಿ ನ್ಯಾಯಾಲಯಗಳಿಗೆ ಹಾಜರಾಗುವ ಬದಲು, ವಿಡಿಯೊ ಕಾನ್ಫರೆನ್ಸ್ ಮೂಲಕ ಹಾಜರಾಗುವುದಕ್ಕೆ ಅನುಮತಿ ನೀಡಬೇಕು. ಹೀಗೆ ಮಾಡುವುದರಿಂದ ನ್ಯಾಯಾಲಯ ಹಾಗೂ ಸರ್ಕಾರದ ಸಮಯ ಮತ್ತು ಸಂಪನ್ಮೂಲದ ಉಳಿತಾಯ ಸಾಧ್ಯವಾಗಲಿದೆ ಎಂದು 'ಎಸ್‌ಒಪಿ'ಯಲ್ಲಿ ಹೇಳಲಾಗಿದೆ.
'ಸರ್ಕಾರ ಮತ್ತು ನ್ಯಾಯಾಂಗದ ನಡುವೆ ಹೆಚ್ಚು ಸೌಹಾರ್ದ ಹಾಗೂ ಅರ್ಥಪೂರ್ಣ ವಾತಾವರಣ ನಿರ್ಮಿಸುವುದು ಈ ಎಸ್‌ಒಪಿ ಉದ್ದೇಶ. ನ್ಯಾಯಾಲಯದ ಆದೇಶಗಳ ಪಾಲನೆಗೆ ಸಂಬಂಧಿಸಿ ಗುಣಮಟ್ಟವನ್ನು ಸುಧಾರಿಸುವುದು ಹಾಗೂ ಆ ಮೂಲಕ ನ್ಯಾಯಾಂಗ ನಿಂದನೆಗೆ ಗುರಿಯಾಗುವುದನ್ನು ತಗ್ಗಿಸುವ ಉದ್ದೇಶವೂ ಇದೆ' ಎಂದು ಎಸ್‌ಒಪಿಯಲ್ಲಿ ಹೇಳಲಾಗಿದೆ.
'ಎಸ್‌ಒಪಿ'ಯಲ್ಲಿನ ಇತರ ಅಂಶಗಳು
* ಖುದ್ದಾಗಿ ಹಾಜರಾಗಲೇಬೇಕು ಎಂಬ ಸಂದರ್ಭಗಳಲ್ಲಿ ಅಧಿಕಾರಿಗೆ ಸಾಕಷ್ಟು ಮುಂಚಿತವಾಗಿ ನೋಟಿಸ್ ನೀಡಬೇಕು
* ಅಧಿಕಾರಿ ಧರಿಸುವ ವಸ್ತ್ರ/ದೈಹಿಕ ನೋಟ/ಶೈಕ್ಷಣಿಕ ಮತ್ತು ಸಾಮಾಜಿಕ ಹಿನ್ನೆಲೆ ಬಗ್ಗೆ ಪ್ರತಿಕ್ರಿಯೆ ನೀಡುವುದನ್ನು ನಿಲ್ಲಿಸಬೇಕು
* ತಾವು ಹೊರಡಿಸಿದ ಆದೇಶವೊಂದಕ್ಕೆ ಸಂಬಂಧಿಸಿದ ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆಯನ್ನು ಸ್ವತಃ ನ್ಯಾಯಾಧೀಶರೇ ನಡೆಸಬಾರದು
* ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಾಗೂ ಇತರ ಭಾಗೀದಾರರ ಮೇಲೆ ವ್ಯಾಪಕ ಪರಿಣಾಮ ಬೀರಬಹುದಾದ ನೀತಿಗಳನ್ನು ಪ್ರಶ್ನಿಸಿ ವೈಯಕ್ತಿಕ ನೆಲೆಯಲ್ಲಿ ಸಲ್ಲಿಸಿರುವ ಅರ್ಜಿಗಳ ಕುರಿತು ತೀರ್ಪು ಪ್ರಕಟಿಸುವ ವೇಳೆ ಹೆಚ್ಚು ಎಚ್ಚರಿಕೆ ವಹಿಸುವುದು ಅಗತ್ಯ.