HEALTH TIPS

ಕ್ವಿಟ್‌ 'ಇಂಡಿಯಾ': ಮೋದಿ ಕರೆ

                 ವದೆಹಲಿ: ಪ್ರತಿಪಕ್ಷಗಳ ಮೈತ್ರಿಕೂಟವಾದ 'ಇಂಡಿಯಾ'ವನ್ನು ಬ್ರಿಟಿಷ್‌ ಈಸ್ಟ್‌ ಇಂಡಿಯಾ ಕಂಪನಿ ಹಾಗೂ ಭಯೋತ್ಪಾದನಾ ಸಂಘಟನೆಗಳೊಂದಿಗೆ ಸಮೀಕರಿಸಿ ಲೇವಡಿ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ಈಗ 'ಕ್ವಿಟ್‌ ಇಂಡಿಯಾ' ಚಳವಳಿ ಉಲ್ಲೇಖಿಸಿ ಟೀಕಾಪ್ರಹಾರ ನಡೆಸಿದ್ದಾರೆ.

                 ಅಮೃತ ಭಾರತ ನಿಲ್ದಾಣ ಯೋಜನೆಯಡಿ ದೇಶದ ವಿವಿಧ ರೈಲು ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸುವ ಕಾರ್ಯಕ್ರಮಕ್ಕೆ ಭಾನುವಾರ ವರ್ಚುವಲ್‌ ಆಗಿ ಚಾಲನೆ ನೀಡಿದ ಬಳಿಕ ಅವರು, ಪ್ರತಿಪಕ್ಷಗಳ ಕಾರ್ಯವೈಖರಿ ವಿರುದ್ಧ ಹರಿಹಾಯ್ದರು.

                'ಕ್ವಿಟ್ ಇಂಡಿಯಾ' ಚಳವಳಿಯ 80ನೇ ವರ್ಷಾಚರಣೆಯು ಆಗಸ್ಟ್‌ 9ರಂದು ನಡೆಯಲಿರುವುದನ್ನು ಉಲ್ಲೇಖಿಸಿದ ಅವರು, 'ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಹೊಸ ಶಕ್ತಿ ನೀಡಿದ ಈ ದಿನವನ್ನು ಎಂದಿಗೂ ಮರೆಯಲಾಗದು' ಎಂದು ಸ್ಮರಿಸಿದರು.

                 ಭ್ರಷ್ಟಾಚಾರ, ಕುಟುಂಬ ರಾಜಕಾರಣ ಹಾಗೂ ತುಷ್ಟೀಕರಣವೇ 'ಇಂಡಿಯಾ'ದ ಬೀಜಮಂತ್ರವಾಗಿವೆ. ದೇಶದಿಂದ ಇವುಗಳನ್ನು ತೊಲಗಿಸುವ ಸಮಯ ಬಂದಿದೆ. 'ಪ್ರತಿಯೊಂದು ಕೆಡುಕು ಭಾರತ ಬಿಟ್ಟು ತೊಲಗಲಿ', 'ಭ್ರಷ್ಟಾಚಾರ ಭಾರತ ಬಿಟ್ಟು ತೊಲಗಲಿ', 'ತುಷ್ಟೀಕರಣ ಭಾರತ ಬಿಟ್ಟು ತೊಲಗಲಿ' ಎಂದು ಇಡೀ ದೇಶವೇ ಗರ್ಜಿಸುತ್ತಿದೆ ಎಂದು ಮೋದಿ ಹೇಳಿದರು.

                'ವಿರೋಧ ಪಕ್ಷಗಳು ಒಳ್ಳೆಯ ಕೆಲಸವನ್ನು ಮಾಡುವುದಿಲ್ಲ; ಬೇರೆಯವರು ಮಾಡಿದರೂ ಸಹಿಸುವುದಿಲ್ಲ. ಟೀಕಿಸುವುದನ್ನೇ ಪ್ರವೃತ್ತಿ ಮಾಡಿಕೊಂಡಿದ್ದು ನಕಾರಾತ್ಮಕ ರಾಜಕೀಯಕ್ಕೆ ಇಳಿದಿವೆ' ಎಂದು ಆರೋ‍ಪಿಸಿದರು.

                  ಕೇಂದ್ರ ಸರ್ಕಾರವು ಸುಸಜ್ಜಿತವಾದ ಸಂಸತ್‌ ಭವನ ನಿರ್ಮಿಸಿದೆ. ಇದು ಸರ್ಕಾರ ಮತ್ತು ಪ್ರತಿಪಕ್ಷಗಳು ಪ್ರತಿನಿಧಿಸುವ ಪ್ರಜಾಪ್ರಭುತ್ವದ ಹೆಗ್ಗುರುತಾಗಿದೆ. ದೇಶದ ಹೆಮ್ಮೆಯ ಪ್ರತೀಕವಾದ ಇದಕ್ಕೂ ವಿರೋಧ ಕೇಳಿಬಂತು. ಎ‍ಪ್ಪತ್ತು ವರ್ಷಗಳಾದರೂ ಹುತಾತ್ಮರ ಸ್ಮಾರಕ ನಿರ್ಮಿಸಲಿಲ್ಲ. ಇದನ್ನು ನಾವು ಪೂರ್ಣಗೊಳಿಸಿದಾಗ ಅಪಸ್ವರ ಕೇಳಿಬಂದಿತು. ಕರ್ತವ್ಯ ಪಥದ ಅಭಿವೃದ್ಧಿಗೂ ವಿರೋಧದ ಕೂಗು ಎದ್ದಿತು. ಲಜ್ಜೆಗೆಟ್ಟಿರುವ ವಿರೋಧ ಪಕ್ಷಗಳು ಎಲ್ಲವನ್ನೂ ವಿರೋಧಿಸುವ ಗುಣವನ್ನು ಮೈಗೂಡಿಸಿಕೊಂಡಿವೆ. ಇದು ದೇಶದ ದುರದೃಷ್ಟ ಎಂದು ಟೀಕಿಸಿದರು.

                  ದೇಶದ ಪ್ರಥಮ ಗೃಹ ಸಚಿವ ಸರ್ದಾರ್‌ ವಲ್ಲಭಬಾಯಿ ಪಟೇಲ್‌ ಅವರ ಅತಿದೊಡ್ಡ ಪ್ರತಿಮೆ ನಿರ್ಮಿಸಿದ್ದೇವೆ. ಕೆಲವು ಪಕ್ಷಗಳು ಅವರನ್ನು ಚುನಾವಣೆಯಲ್ಲಿ ಮಾತ್ರವೇ ಸ್ಮರಿಸುತ್ತವೆ. ಆದರೆ, ಅವರಿಗೆ ಗೌರವ ಸಲ್ಲಿಸಲಿಲ್ಲ. ನಾವು ಪ್ರತಿಮೆ ನಿರ್ಮಿಸಿದಾಗಲೂ ನಮ್ಮನ್ನು ಟೀಕಿಸದೆ ಅವರು ಬಿಡಲಿಲ್ಲ ಎಂದರು.

                    ಮೂರು ದಶಕದ ಬಳಿಕ ಭಾರತೀಯರು ಪೂರ್ಣ ಬಹುಮತದ ಸರ್ಕಾರ ರಚನೆಗೆ ಸಹಕರಿಸಿದರು. ಸರ್ಕಾರವು ಜನರ ಆಶೋತ್ತರವನ್ನು ಈಡೇರಿಸಿದೆ. ರಾಷ್ಟ್ರದ ಅಭಿವೃದ್ಧಿಗೆ ಪಣ ತೊಟ್ಟಿದೆ. ಹಾಗಾಗಿ, ಇಡೀ ವಿಶ್ವದ ಗಮನ ಭಾರತದತ್ತ ನೆಟ್ಟಿದೆ. ನಮ್ಮನ್ನು ನೋಡುವ ದೃಷ್ಟಿಕೋನವೂ ಬದಲಾಗಿದೆ. ವಿಶ್ವದಾದ್ಯಂತ ‌ದೇಶದ ಗೌರವವೂ ಹೆಚ್ಚಿದೆ ಎಂದು ಹೇಳಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries