ಶ್ರೀನಗರ: ಪಾಕಿಸ್ತಾನದ ಪ್ರಚೋದನೆಯಿಂದ ಕಣಿವೆಯಲ್ಲಿ ಸಾಮಾನ್ಯ ಜೀವನ ಅಸ್ತವ್ಯಸ್ತಗೊಳಿಸುವ ಪ್ರತ್ಯೇಕತಾವಾದಿ ಮತ್ತು ಉಗ್ರ ಸಂಘಟನೆಗಳ ಯುಗ ಅಂತ್ಯಗೊಂಡಿದೆ. ವಿಶೇಷ ಸ್ಥಾನಮಾನ ರದ್ದುಪಡಿಸಿದ ನಾಲ್ಕು ವರ್ಷಗಳ ನಂತರ ಅಭಿವೃದ್ಧಿ ಮತ್ತು ಶಾಂತಿ ಇಲ್ಲಿ ಚರ್ಚೆಯ ವಿಷಯವಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಭಾನುವಾರ ಹೇಳಿದ್ದಾರೆ.
ಪತ್ರಕರ್ತರರೊಂದಿಗೆ ಸಂವಾದ ನಡೆಸಿದ ಸಿನ್ಹಾ, ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆ ಮತ್ತು ಮತದಾರರ ಪಟ್ಟಿಗಳ ಪರಿಷ್ಕರಣೆ ಪೂರ್ಣಗೊಂಡ ನಂತರ ಕೇಂದ್ರಾಡಳಿತ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ನಡೆಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದು ಚುನಾವಣಾ ಆಯೋಗಕ್ಕೆ ಬಿಟ್ಟಿದ್ದು ಎಂದು ಹೇಳಿದರು.
ಜಮ್ಮು-ಕಾಶ್ಮೀರಕ್ಕೂ ಸೂಕ್ತ ಸಮಯದಲ್ಲಿ ರಾಜ್ಯ ಸ್ಥಾನಮಾನ ನೀಡಲಾಗುವುದು ಎಂದು ಗೃಹಸಚಿವ ಅಮಿತ್ ಶಾ ಸಂಸತ್ತಿನಲ್ಲಿ ಭರವಸೆ ನೀಡಿದ್ದರು ಎಂದು ಅವರು ಹೇಳಿದರು.
ಕಾಶ್ಮೀರಿ ಪಂಡಿತರು ಮತ್ತು ವಲಸೆ ಕಾರ್ಮಿಕರನ್ನು ಗುರಿಯಾಗಿಸಿಕೊಂಡು ಕೆಲವೊಮ್ಮೆ ಉದ್ದೇಶಿತ ಹತ್ಯೆಗಳ ಘಟನೆಗಳ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿನ್ಹಾ, ಭಯೋತ್ಪಾದಕ ದಾಳಿಗಳಲ್ಲಿ ಗಣನೀಯ ಇಳಿಕೆಯಾಗಿದೆ ಎಂದರು.
ಈಗ ಜನರು ಯಾವುದೇ ಧಾರ್ಮಿಕ ಮೆರವಣಿಗೆ ನಡೆಸಲು ಮುಕ್ತರಾಗಿದ್ದಾರೆ. ದೇಶದ ಏಕತೆ ಮತ್ತು ಸಮಗ್ರತೆಯ ಬಗ್ಗೆ ಯಾವುದೇ ನಕಾರಾತ್ಮಕ ಉಲ್ಲೇಖ ಇರಬಾರದು. ಬಹಳ ದೊಡ್ಡ ಬದಲಾವಣೆಯೆಂದರೆ ಸಾಮಾನ್ಯ ಮನುಷ್ಯ ತನ್ನ ಇಚ್ಛೆಯಂತೆ ಬದುಕಲು ಸ್ವತಂತ್ರನಾಗಿದ್ದಾನೆ. ಇನ್ನು ಮುಂದೆ ಇಲ್ಲಿ ಯಾರ ಆದೇಶವೂ ನಡೆಯುವುದಿಲ್ಲ. ಬೀದಿ ಹಿಂಸಾಚಾರ ಸಂಪೂರ್ಣ ಕೊನೆಗೊಂಡಿದೆ ಎಂದು ಅವರು ಪ್ರತಿಪಾದಿಸಿದರು.