ತಿರುವನಂತಪುರಂ: ಕೇರಳ ವಿಶ್ವವಿದ್ಯಾಲಯದ ಹೆಸರನ್ನು ಬದಲಾಯಿಸುವಂತೆ ಆಗ್ರಹಿಸಿ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಅವರಿಗೆ ಮನವಿ ಸಲ್ಲಿಸಲಾಗಿದೆ.
ತಿರುವಾಂಕೂರು ವಿವಿ ಎಂದು ಹೆಸರನ್ನು ಬದಲಾಯಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ. ಈ ಸಂದರ್ಭದಲ್ಲಿ ಕೇರಳ ವಿಶ್ವವಿದ್ಯಾನಿಲಯದ ಹೆಸರು ಪ್ರಸ್ತುತವಲ್ಲ ಮತ್ತು ಸಂಸ್ಥೆಯು ಪ್ರತಿನಿಧಿಸುವ ನ್ಯಾಯವ್ಯಾಪ್ತಿ, ಪರಂಪರೆ ಅಥವಾ ಪ್ರದೇಶವನ್ನು ನಿಖರವಾಗಿ ಪ್ರತಿಬಿಂಬಿಸುವುದಿಲ್ಲ ಎಂಬ ಕಾರಣಕ್ಕಾಗಿ ಹೆಸರು ಬದಲಾವಣೆಯ ಬೇಡಿಕೆಯನ್ನು ಎತ್ತಲಾಗಿದೆ.
ವಿಶ್ವವಿದ್ಯಾನಿಲಯಗಳ ಕುಲಪತಿಯೂ ಆಗಿರುವ ರಾಜ್ಯಪಾಲರಿಗೆ ತಿರುವಾಂಕೂರು ರಾಜಮನೆತನದ ಅಶ್ವತಿ ತಿರುನಾಳ್ ಗೌರಿ ಲಕ್ಷ್ಮಿ ಬಾಯಿ, ತಿರುವನಂತಪುರಂ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಎಸ್.ಎನ್.ರಘುಚಂದ್ರನ್ ನಾಯರ್ ಮತ್ತು ಕಾರ್ಯದರ್ಶಿ ಅಬ್ರಹಾಂ ಥಾಮಸ್ ಅವರು ಮನವಿ ಸಲ್ಲಿಸಿದರು. ಈ ಪ್ರದೇಶದ ಸಾಂಸ್ಕøತಿಕ ಗುರುತನ್ನು ಪ್ರತಿಬಿಂಬಿಸಲು ಮತ್ತು ಭಾರತದಲ್ಲಿ ಶಿಕ್ಷಣದ ಅಭಿವೃದ್ಧಿಗೆ ತಿರುವಾಂಕೂರು ಜನರ ಕೊಡುಗೆಯನ್ನು ಗುರುತಿಸಲು ವಿಶ್ವವಿದ್ಯಾಲಯವನ್ನು ತಿರುವಾಂಕೂರು ವಿಶ್ವವಿದ್ಯಾಲಯ ಅಥವಾ ತಿರುವಾಂಕೂರು ವಿ.ವಿ ಎಂದು ಮರುನಾಮಕರಣ ಮಾಡುವುದು ಸೂಕ್ತ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.