ಕಾಸರಗೋಡು: ಮಲಬಾರ್‍ನ ಪ್ರಮುಖ ಪ್ರವಾಸಿತಾಣ ರಾಣಿಪುರಂನಲ್ಲಿ ಕೈಗೊಳ್ಳಲಾಗಿರುವ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಯನ್ನು ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಪರಿಶೀಲಿಸಿದರು. ರಾಜ್ಯ ಪ್ರವಾಸೋದ್ಯಮ ಇಲಾಖೆಯಿಂದ ಮಂಜೂರಾದ 1.93 ಕೋಟಿ ರೂ.ಗಳ ಕಾಮಗಾರಿ ಪ್ರಗತಿಯ ಬಗ್ಗೆ ಡಿಟಿಪಿಸಿ ಕಾರ್ಯದರ್ಶಿ ಲಿಜೋ ಜೋಸೆಫ್ ಜಿಲ್ಲಾಧಿಕಾರಿಗೆ ಮಾಹಿತಿ ನೀಡಿದರು. ಈಗಾಗಲೇ ಪ್ರವಾಸಿಗರಿಗೆ ವಾಸ್ತವ್ಯಕ್ಕೆ ಹನ್ನೆರಡು ಕೊಠಡಿಗಳು ಮತ್ತು ಸಂಬಂಧಿತ ಸೌಲಭ್ಯಗಳಿದ್ದು, ಈ ಸಂಕೀರ್ಣವು ಪ್ರವಾಸಿಗರಿಗೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸುತ್ತಿದೆ. ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಒಡೆತನದ ಪ್ರವಾಸಿ ಸಂಕೀರ್ಣದ ಪ್ರಸ್ತುತ ಕಾರ್ಯನಿರ್ವಹಣೆಯನ್ನು ಮೌಲ್ಯಮಾಪನ ಮಾಡಿದ ನಂತರ, ಜಿಲ್ಲಾಧಿಕಾರಿಗಳು ಕಡಿದಾದ ಬೆಟ್ಟವನ್ನು ಏರಿ ಚಾರಣದ ಆನಂದವನ್ನೂ ಅನುಭವಿಸಿದರು. ಸ್ವಾತಂತ್ರ್ಯ ದಿನಾಚರಣೆಯಂದು 641 ಮಂದಿ ರಾಣಿಪುರಂಗೆ ಭೇಟಿ ನೀಡಿದ್ದರು. ಪ್ರತಿದಿನ ನೂರಾರು ಪ್ರವಾಸಿಗರು ರಾಣಿಪುರ ಬೆಟ್ಟದ ಪ್ರಕೃತಿಯ ಸೊಬಗು ಸವಿಯಲು ಆಗಮಿಸುತ್ತಿದ್ದಾರೆ.
ವಲಯ ಅರಣ್ಯಾಧಿಕಾರಿ ಬಿ.ಶೇಷಪ್ಪ, ಪನತ್ತಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಸನ್ನ ಪ್ರಸಾದ್, ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ಲತಾ ಅರವಿಂದನ್, ವಾರ್ಡ್ ಸದಸ್ಯರಾದ ಸಿ.ಆರ್.ಬಿಜು, ಪಿ.ಕೆ.ಸೌಮ್ಯಮೋಳ್, ಪ್ರವಾಸಿ ಸಂಕೀರ್ಣ ವ್ಯವಸ್ಥಾಪಕ ಶಾಜಿ, ಮಧು ಮತ್ತಿತರರು ಜಿಲ್ಲಾಧಿಕಾರಿ ಜತೆಯಲ್ಲಿದ್ದರು.