ತಿರುವನಂತಪುರಂ: ಅನಂತಪದ್ಮನಾಭ ದೇವರ ಚಿತ್ರವಿರುವ ಚಿನ್ನದ ನಾಣ್ಯಗಳನ್ನು ವಿಶ್ವಪ್ರಸಿದ್ದ ಅನಂತಪುರ ಶ್ರೀಅನಂತಪದ್ಮನಾಭ ಸ್ವಾಮಿ ದೇವಾಲಯ ಬಿಡುಗಡೆ ಮಾಡಿದೆ. ಪದ್ಮನಾಭಸ್ವಾಮಿ ದೇವಸ್ಥಾನದ ಪೂರ್ವ ಪ್ರಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಚಿನ್ನದ ನಾಣ್ಯವನ್ನು ಬಿಡುಗಡೆ ಮಾಡಲಾಯಿತು.
ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಬಿ.ಮಹೇಶ್ ಅವರು ಚಿನ್ನದ ನಾಣ್ಯವನ್ನು ಆಡಳಿತ ಮಂಡಳಿ ಸದಸ್ಯ ಆದಿತ್ಯ ವರ್ಮ ಅವರಿಗೆ ನೀಡಿದರು. ದೇವಸ್ಥಾನದ ವ್ಯವಸ್ಥಾಪಕ ಬಿ.ಶ್ರೀಕುಮಾರ್, ಲೆಕ್ಕ ಪರಿಶೋಧನೆ ಮತ್ತು ಹಣಕಾಸು ಅಧಿಕಾರಿ ವೆಂಕಿಟ ಸುಬ್ರಮಣ್ಯಂ ಮತ್ತು ದೇವಸ್ಥಾನದ ಶ್ರೀಕಾರ್ಯಸ್ಥ ಅನಂತರಾಮನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಭಕ್ತರಿಗೆ ಒಂದು ಗ್ರಾಂ, ಎರಡು ಗ್ರಾಂ, ನಾಲ್ಕು ಗ್ರಾಂ ಮತ್ತು ಎಂಟು ಗ್ರಾಂ ತೂಕದ ನಾಣ್ಯಗಳನ್ನು ನೀಡಲಾಗುತ್ತದೆ. ದೇವಸ್ಥಾನದಲ್ಲಿ ಸಿಗುವ ಚಿನ್ನಾಭರಣಗಳನ್ನು ಕರಗಿಸಿ ನಾಣ್ಯಗಳನ್ನು ತಯಾರಿಸಲಾಗಿದೆ. ಕೆಲವೇ ನಾಣ್ಯಗಳು ಮಾರಾಟಕ್ಕೆ ಲಭ್ಯವಿರುತ್ತವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಾಣ್ಯದ ಬೆಲೆ ಚಿನ್ನದ ದೈನಂದಿನ ಮಾರುಕಟ್ಟೆ ಬೆಲೆಯನ್ನು ಅವಲಂಬಿಸಿರುತ್ತದೆ. ನಾಣ್ಯಗಳನ್ನು ಪಡೆಯಲು ದೇವಸ್ಥಾನದ ಕೌಂಟರ್‍ಗಳ ಮೂಲಕ ಪಾವತಿಸಬೇಕು ಎಂದು ಸಂಬಂಧಪಟ್ಟವರು ತಿಳಿಸಿರುವರು.