ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ವಾಯುವಿನ ಗುಣಮಟ್ಟ ಮತ್ತಷ್ಟು ಕುಸಿದಿದ್ದು, ಜಗತ್ತಿನಲ್ಲೇ ಅತಿ ಹೆಚ್ಚು ಮಾಲಿನ್ಯವಿರುವ ನಗರ ಎನಿಸಿದೆ.
ವಾಯುಮಾಲಿನ್ಯ ಪ್ರಮಾಣ ಇದೇ ಗತಿಯಲ್ಲಿ ಮುಂದುವರಿದಲ್ಲಿ ನಗರ ಜನತೆಯು ತಮ್ಮ ಆಯಸ್ಸಿನಲ್ಲಿ 11.9 ವರ್ಷಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಅಧ್ಯಯನ ವರದಿಯೊಂದು ಎಚ್ಚರಿಸಿದೆ.
ಷಿಕಾಗೊ ವಿಶ್ವವಿದ್ಯಾಲಯದ ಎನರ್ಜಿ ಪಾಲಿಸಿ ಇನ್ಸ್‌ಟಿಟ್ಯೂಟ್ (ಇಪಿಐಸಿ) ಬಿಡುಗಡೆ ಮಾಡಿರುವ 'ವಾಯು ಗುಣಮಟ್ಟ ಜೀವನ ಸೂಚ್ಯಂಕ' (ಎಕ್ಯುಎಲ್‌ಐ) ಕುರಿತ ವರದಿಯಲ್ಲಿ ಈ ಅಂಶಗಳಿವೆ.
ವಾರ್ಷಿಕ ಸರಾಸರಿ ಪಾರ್ಟಿಕ್ಯುಲೇಟ್ ಮಾಲಿನ್ಯ ಮಟ್ಟ ಒಂದು ಘನ ಮೀಟರ್‌ಗೆ 5 ಮೈಕ್ರೊ ಗ್ರಾಮ್‌ಗಳಷ್ಟಿರಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಹೇಳುತ್ತದೆ. ಆದರೆ, ಭಾರತದ 130 ಕೋಟಿ ಜನರು ಈ ಸರಾಸರಿ ಪ್ರಮಾಣಕ್ಕಿಂತ ಹೆಚ್ಚು ಮಾಲಿನ್ಯ ಇರುವ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ ಎಂದು ಇಪಿಐ ಬಿಡುಗಡೆ ಮಾಡಿರುವ ಈ ಸೂಚ್ಯಂಕ ಹೇಳುತ್ತದೆ.
ದೆಹಲಿಯ ಜನಸಂಖ್ಯೆ 1.80 ಕೋಟಿ ಇದೆ. ಒಂದು ವೇಳೆ ವಾಯು ಮಾಲಿನ್ಯವು ಇದೇ ಪ್ರಮಾಣದಲ್ಲಿ ಮುಂದುವರಿದಲ್ಲಿ, ರಾಷ್ಟ್ರೀಯ ಮಾರ್ಗಸೂಚಿಯಲ್ಲಿ ಉಲ್ಲೇಖಿಸಿರುವುದಕ್ಕೆ ಹೋಲಿಸಿದಲ್ಲಿ ನಗರ ವಾಸಿಗಳು ತಮ್ಮ ಆಯಸ್ಸಿನಲ್ಲಿ 8.5 ವರ್ಷಗಳನ್ನು ಕಳೆದುಕೊಳ್ಳುವರು ಎಂದು ಸೂಚ್ಯಂಕ ವಿವರಿಸುತ್ತದೆ.
ಅಧ್ಯಯನದ ಇತರ ಅಂಶಗಳು
* ದೇಶದ ಜನಸಂಖ್ಯೆಯಲ್ಲಿ ಶೇ 67.4ರಷ್ಟು ಜನರು ಪ್ರಮಾಣಿತ ರಾಷ್ಟ್ರೀಯ ವಾಯು ಗುಣಮಟ್ಟ 40 ಮೈಕ್ರೊ ಗ್ರಾಮ್/ಘನ ಮೀಟರ್‌ಗಿಂತ ಹೆಚ್ಚು ಮಾಲಿನ್ಯ ಇರುವ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ.
* ಮಾಲಿನ್ಯಕಾರಕ 'ಪಿಎಂ 2.5'ನ ಮಟ್ಟವು ಭಾರತೀಯರ ಆಯಸ್ಸನ್ನು 5.3 ವರ್ಷಗಳಷ್ಟು ಕಡಿಮೆ ಮಾಡಲಿದೆ.
* ವಾಹನಗಳು, ವಸತಿ ಪ್ರದೇಶಗಳು ಹಾಗೂ ಕೃಷಿ ಚಟುವಟಿಕೆಗಳೇ ಮಾಲಿನ್ಯದ ಮೂಲಗಳು.
'ಆರೋಗ್ಯ: ಜಾಗತಿಕವಾಗಿ ದೊಡ್ಡ ಅಪಾಯ'
ವಿಶ್ವದೆಲ್ಲೆಡೆ ಮನುಷ್ಯನ ಆರೋಗ್ಯಕ್ಕೆ ಅಪಾಯ ಒಡ್ಡುವ ಅಂಶಗಳ ಪೈಕಿ ವಾಯುಮಾಲಿನ್ಯ ಪ್ರಮುಖವಾದುದು. ಆದರೆ ಭಾರತ ಸೇರಿದಂತೆ ಆರು ದೇಶಗಳ ಜನರ ಆಯಸ್ಸಿನ ಮೇಲೆ ವಾಯು ಮಾಲಿನ್ಯ ಹೆಚ್ಚು ಪರಿಣಾಮ ಬೀರುತ್ತಿರುವುದು ಅಧ್ಯಯನದಿಂದ ಕಂಡುಬಂದಿದೆ ಎಂದು ಇಪಿಐಸಿ ತಜ್ಞರು ಹೇಳುತ್ತಾರೆ. ಬಾಂಗ್ಲಾದೇಶ ಪಾಕಿಸ್ತಾನ ಚೀನಾ ನೈಜೀರಿಯಾ ಹಾಗೂ ಇಂಡೊನೇಷ್ಯಾ ಇತರ ದೇಶಗಳಾಗಿವೆ.
'ಈ ಆರು ದೇಶಗಳಲ್ಲಿ ವಾಯು ಮಾಲಿನ್ಯದ ಪರಿಣಾಮ ದೊಡ್ಡದು. ಈ ದೇಶಗಳ ವಾಸಿಗಳು ಯಾವುದೇ ಗಾಳಿಯನ್ನು ಉಸಿರಾಡಿದರೂ ಅವರ ಆಯಸ್ಸಿನಲ್ಲಿ ಒಂದರಿಂದ ಆರಕ್ಕಿಂತ ಹೆಚ್ಚು ವರ್ಷಗಳನ್ನು ಕಳೆದುಕೊಳ್ಳುತ್ತಿದ್ದಾರೆ' ಎಂದು ಷಿಕಾಗೊ ವಿವಿಯ ಪ್ರಾಧ್ಯಾಪಕ ಮೈಕಲ್ ಗ್ರೀನ್‌ಸ್ಟೋನ್ ಹೇಳಿದ್ದಾರೆ.