ಕೋಟಾ: ಕೋಟಾದಲ್ಲಿ ಜನವರಿ 2023 ರಿಂದ ಇದುವರೆಗೆ 21 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದು, ವಿದ್ಯಾರ್ಥಿಗಳ ಸಾವು ತಡೆಯಲು ರಾಜಸ್ಥಾನ ಸರ್ಕಾರ ಪ್ರತಿ ಸೀಲಿಂಗ್ ಫ್ಯಾನ್‌ಗೆ ಆತ್ಮಹತ್ಯೆ ತಡೆ ಸಾಧನ ಅಳವಡಿಸಲು ನಿರ್ಧರಿಸಿದೆ.
ಈ ತಿಂಗಳಲ್ಲಿಯೇ ಕೋಟಾದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕೋಚಿಂಗ್ ಪಡೆಯುತ್ತಿದ್ದ ನಾಲ್ವರು ವಿದ್ಯಾರ್ಥಿಗಳು ತಮ್ಮ ಹಾಸ್ಟೆಲ್ ಕೊಠಡಿಯಲ್ಲಿ ನೇಣಿಗೆ ಶರಣಾಗಿದ್ದು, ಇದನ್ನು ತಡೆಯಲು ಸೀಲಿಂಗ್ ಫ್ಯಾನ್‌ಗಳಲ್ಲಿ ಸ್ಪ್ರಿಂಗ್ ಸಾಧನ ಅಳವಡಿಸುವಂತೆ ಅಧಿಕಾರಿಗಳು ಆದೇಶಿಸಿದ್ದಾರೆ.
ಸೀಲಿಂಗ್ ಫ್ಯಾನ್‌ಗಳಲ್ಲಿ ಸ್ಪ್ರಿಂಗ್ ಸಾಧನ ಅಳವಡಿಸುವಂತೆ ಕೋಟಾ ಉಪ ಆಯುಕ್ತ ಒಪಿ ಬಂಕರ್ ಅವರು ಎಲ್ಲಾ ಹಾಸ್ಟೆಲ್ ಮಾಲೀಕರಿಗೆ ಆದೇಶ ಹೊರಡಿಸಿದ್ದು, ಅಳವಡಿಸದಿದ್ದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ಈ ಆತ್ಮಹತ್ಯಾ ತಡೆ ಸ್ಪ್ರಿಂಗ್, 20 ಕಿಲೋಗಳಿಗಿಂತ ಹೆಚ್ಚು ತೂಕವಿರುವ ವಸ್ತುವನ್ನು ಫ್ಯಾನ್‌ಗೆ ನೇತುಹಾಕಿದರೆ, ಅದು ವಿಸ್ತಾರವಾಗುತ್ತದೆ ಮತ್ತು ಸೈರನ್ ಕೂಡ ಹೊಡೆಯುತ್ತದೆ. ಈ ಮೂಲಕ ಯಾವುದೇ ಸಂಭವನೀಯ ಅಪಾಯವನ್ನು ತಪ್ಪಿಸುತ್ತದೆ.
"ಆತ್ಮಹತ್ಯೆ ತಡೆ" ಸೀಲಿಂಗ್ ಫ್ಯಾನ್, ಒತ್ತಡಕ್ಕೊಳಗಾದ ವಿದ್ಯಾರ್ಥಿಗಳಿಗೆ ಎಷ್ಟು ಸಹಾಯ ಮಾಡುತ್ತದೆ ಎಂದು ತಜ್ಞರು ಖಚಿತವಾಗಿ ಹೇಳಿಲ್ಲ ಎಂದು ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ ವರದಿ ಮಾಡಿದೆ.