ಜೋಹಾನ್ಸ್‌ಬರ್ಗ್: ಇಲ್ಲಿ ನಡೆಯುತ್ತಿರುವ ಬ್ರಿಕ್ಸ್ ಶೃಂಗಸಭೆಯ ಸಂದರ್ಭದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಚೀನಾದ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರೊಂದಿಗೆ ಗಡಿ ವಿಚಾರದ ಕುರಿತಂತೆ ಮಾತುಕತೆ ನಡೆಸಿದ್ದಾರೆ.
ವಾಸ್ತವಿಕ ನಿಯಂತ್ರಣ ರೇಖೆಯುದ್ದಕ್ಕೂ ಗಡಿ ಸಮಸ್ಯೆಗಳ ಬಗ್ಗೆ ಭಾರತ ಹೊಂದಿರುವ ಕಳವಳಗಳನ್ನು ಎತ್ತಿ ತೋರಿಸಿದ್ದಾರೆ.
ಬಳಿಕ, ಲಡಾಖ್‌ನಲ್ಲಿ ಉಭಯ ದೇಶಗಳ ಮಿಲಿಟರಿ ಅಧಿಕಾರಿಗಳಿಗೆ ಸೇನೆ ಹಿಂತೆದುಕೊಳ್ಳುವ ಮತ್ತು ಸಂಘರ್ಷ ತಪ್ಪಿಸುವ ನಿಟ್ಟಿನಲ್ಲಿ ಕೆಲಸ ಮಾಡುವಂತೆ ಸೂಚಿಸಲು ಉಭಯ ನಾಯಕರು ಒಪ್ಪಿದ್ದಾರೆ ಎಂದು ಭಾರತದ ವಿದೇಶಾಂಗ ಕಾರ್ಯದರ್ಶಿ ತಿಳಿಸಿದ್ದಾರೆ.
15ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾರತದ ಭಾಗವಹಿಸುವಿಕೆಯ ಕುರಿತು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ವಿದೇಶಾಂಗ ಕಾರ್ಯದರ್ಶಿ ವಿನಯ್ ಮೋಹನ್ ಕ್ವಾತ್ರಾ, ಶೃಂಗಸಭೆಯ ಸಮಯದಲ್ಲಿ ಪ್ರಧಾನಿ ಮೋದಿ ಅವರು ಇತರ ಬ್ರಿಕ್ಸ್ ನಾಯಕರೊಂದಿಗೆ ಸಂವಾದ ನಡೆಸಿದರು ಎಂದು ತಿಳಿಸಿದರು.
ಭಾರತ-ಚೀನಾ ಬಾಂಧವ್ಯವನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಗಡಿ ಪ್ರದೇಶಗಳಲ್ಲಿ ಶಾಂತಿ ಕಾಪಾಡುವುದು, ಎಲ್‌ಎಸಿಯನ್ನು ಗಮನದಲ್ಲಿಟ್ಟುಕೊಂಡು ಉಲ್ಲಂಘನೆಯಾಗದಂತೆ ಗಮನ ಹರಿಸುವುದು ಅತ್ಯಗತ್ಯ ಎಂದು ಚೀನಾ ಅಧ್ಯಕ್ಷರ ಜೊತೆಗಿನ ಮಾತುಕತೆಯಲ್ಲಿ ಪ್ರಧಾನಿ ಮೋದಿ ಒತ್ತಿ ಹೇಳಿದ್ದಾರೆ ಎಂದು ತಿಳಿಸಿದರು.
ಭಾರತ ಮತ್ತು ಚೀನಾ ಮಿಲಿಟರಿ ನಡುವೆ ಈ ತಿಂಗಳ ಆರಂಭದಲ್ಲಿ 19ನೇ ಸುತ್ತಿನ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆ ನಡೆದಿತ್ತು.
ಲಡಾಖ್ ಗಡಿಯ ಪಶ್ಚಿಮ ಭಾಗದಲ್ಲಿ ಎಲ್‌ಎಸಿಯಲ್ಲಿ ಉಳಿದಿರುವ ಸಮಸ್ಯೆಗಳ ಪರಿಹಾರದ ಕುರಿತು ಉಭಯ ಕಡೆಯವರು ಸಕಾರಾತ್ಮಕ, ರಚನಾತ್ಮಕ ಮತ್ತು ಆಳವಾದ ಚರ್ಚೆಯನ್ನು ನಡೆಸಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.