ಲಂಡನ್: ಹಿಂದೂ ನಂಬಿಕೆ ತನ್ನ ಜೀವನದ ಪ್ರತಿಯೊಂದು ಅಂಶದಲ್ಲೂ ಮಾರ್ಗದರ್ಶನ ನೀಡುತ್ತದೆ ಮತ್ತು ಬ್ರಿಟನ್ ಪ್ರಧಾನಿಯಾಗಿ ಅತ್ಯುತ್ತಮವಾದುದನ್ನು ಮಾಡಲು ಧೈರ್ಯ ನೀಡುತ್ತದೆ ಎಂದು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಮಂಗಳವಾರ ಹೇಳಿದ್ದಾರೆ.
ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ ಜೀಸಸ್ ಕಾಲೇಜಿನಲ್ಲಿ ಆಧ್ಯಾತ್ಮಿಕ ಗುರು ಮೊರಾರಿ ಬಾಪು ನಡೆಸುತ್ತಿರುವ 'ರಾಮ ಕಥಾ'ಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ನೆರೆದಿದ್ದ ಜನರನ್ನುದ್ದೇಶಿಸಿ ಮಾತನಾಡಿದ ಬ್ರಿಟನ್‌ನ ಮೊದಲ ಭಾರತೀಯ ಮೂಲದ ಪ್ರಧಾನ ಮಂತ್ರಿ, ಬಾಪು, ನಾನು ಇಲ್ಲಿ ಹಿಂದೂ ಆಗಿ ಇದ್ದೇನೆ. ಪ್ರಧಾನಿಯಾಗಿ ಅಲ್ಲ ಎಂದರು.
ಹಿಂದೂ ನಂಬಿಕೆಯು ನನಗೆ ತುಂಬಾ ವೈಯಕ್ತಿಕವಾಗಿದೆ. ಇದು ನನ್ನ ಜೀವನದ ಪ್ರತಿಯೊಂದು ಅಂಶದಲ್ಲೂ ಮಾರ್ಗದರ್ಶನ ನೀಡುತ್ತದೆ. ಪ್ರಧಾನಿಯಾಗುವುದು ದೊಡ್ಡ ಗೌರವ, ಆದರೆ ಇದು ಸುಲಭದ ಕೆಲಸವಲ್ಲ. ಮಾಡಲು ಕಷ್ಟಕರವಾದ ನಿರ್ಧಾರಗಳಿವೆ, ಎದುರಿಸಲು ಕಠಿಣ ಆಯ್ಕೆಗಳಿವೆ. ನಂಬಿಕೆಯು ದೇಶಕ್ಕಾಗಿ ನಾನು ಅತ್ಯುತ್ತಮವಾದುದನ್ನು ಮಾಡಲು ನನಗೆ ಧೈರ್ಯ, ಶಕ್ತಿ ನೀಡುತ್ತದೆ ಎಂದು ಅವರು ಹೇಳಿದರು.
2020 ರಲ್ಲಿ ಮೊದಲ ಬ್ರಿಟಿಷ್ ಭಾರತೀಯ ಚಾನ್ಸೆಲರ್ ಆಗಿ ನಂ. 11 ಡೌನಿಂಗ್ ಸ್ಟ್ರೀಟ್‌ನ ಹೊರಗೆ ದೀಪಾವಳಿ ಹಬ್ಬ ಆಚರಿಸಿದ್ದನ್ನು ನೆನಪಿಸಿಕೊಂಡ ಸುನಕ್, 10 ಡೌನಿಂಗ್ ಸ್ಟ್ರೀಟ್‌ನಲ್ಲಿರುವ ತನ್ನ ಮೇಜಿನ ಮೇಲೆ ಚಿನ್ನದ ಗಣೇಶನು ಸಂತೋಷದಿಂದ ಕುಳಿತಿದ್ದಾನೆ. ಇದು ನಿರ್ಧಾರ ತೆಗೆದುಕೊಳ್ಳುವ ಮುನ್ನಾ ಸಮಸ್ಯೆಗಳನ್ನು ಆಲಿಸುವುದು ಮತ್ತು ಪ್ರತಿಬಿಂಬಿಸುವ ಬಗ್ಗೆ ನನಗೆ ನಿರಂತರ ನೆನಪು ಮಾಡಿಕೊಡುತ್ತದೆ ಎಂದು ತಿಳಿಸಿದರು.
ಸೌತಾಂಪ್ಟನ್‌ನಲ್ಲಿನ ಬಾಲ್ಯದ ಜೀವನ ತನ್ನ ಮೇಲೆ ಪರಿಣಾಮ ಬೀರಿದೆ. ಆಗ ಕುಟುಂಬದವರೊಂದಿಗೆ ನೆರಹೊರೆಯಲ್ಲಿದ್ದ ದೇವಾಲಯಕ್ಕೆ ಭೇಟಿ ನೀಡುತ್ತಿದ್ದಾಗಿ ತಿಳಿಸಿದ ಸುನಕ್, ಬೆಳೆಯುತ್ತಿದ್ದಾಗ ನಮ್ಮ ಸ್ಥಳೀಯ ಮಂದಿರಕ್ಕೆ ಹಾಜರಾಗಲು ಖುಷಿಯಾಗುತಿತ್ತು. ನನ್ನ ಕುಟುಂಬ ಪೊಜೆ, ಹವನಗಳು,ಆರತಿಗಳನ್ನು ಆಯೋಜಿಸುತಿತ್ತು. ನಂತರ, ನನ್ನ ಸಹೋದರ ಮತ್ತು ಸಹೋದರಿ ಮತ್ತು ಸೋದರಸಂಬಂಧಿಗಳೊಂದಿಗೆ ಪ್ರಸಾದವನ್ನು ಬಡಿಸಲು ಸಹಾಯ ಮಾಡುತ್ತಿದೆ. ನಾನು ಬ್ರಿಟಿಷ್ ಮತ್ತು ಹಿಂದೂ ಎಂದು ಹೇಳಿಕೊಳ್ಳಲು ಹೆಮ್ಮೆಪಡುತ್ತೇನೆ ಎಂದರು.
ಕರ್ತವ್ಯ ಅಥವಾ ಸೇವೆಯೇ ಶ್ರೇಷ್ಠ ಮೌಲ್ಯವಾಗಿದೆ. ಈ ಬಹಳಷ್ಟು ಹಿಂದೂ ಮೌಲ್ಯಗಳು ಬ್ರಿಟಿಷ್ ಮೌಲ್ಯಗಳಲ್ಲಿ ಸೇರಿಕೊಂಡಿವೆ. ನನಗೆ, ಜೀವನದ ಸವಾಲುಗಳನ್ನು, ಧೈರ್ಯದಿಂದ ಎದುರಿಸಲು, ವಿನಮ್ರತೆಯಿಂದ ಆಡಳಿತ ಮಾಡಲು ಮತ್ತು ಕೆಲಸ ಮಾಡಲು ಶ್ರೀರಾಮನು ಯಾವಾಗಲೂ ಸ್ಫೂರ್ತಿದಾಯಕ ವ್ಯಕ್ತಿಯಾಗಿದ್ದಾನೆ ಎಂದು ತಿಳಿಸಿದ ಅವರು, ಜೈ ಶ್ರೀರಾಮ್ ಎಂದ ಪದಗಳೊಂದಿಗೆ ತಮ್ಮ ಭಾಷಣ ಮುಗಿಸಿದರು.
ಇನ್ಪೋಸಿಸ್ ಅಧ್ಯಕ್ಷ ನಾರಾಯಣ ಮೂರ್ತಿ ಅವರ ಪುತ್ರಿ ಅಕ್ಷತಾ ಮೂರ್ತಿ ಅವರನ್ನು ವಿವಾಹವಾಗಿರುವ ಸುನಕ್ ಅವರಿಗೆ ಕೃಷ್ಣ ಮತ್ತು ಅನುಷ್ಕಾ ಎಂಬ ಇಬ್ಬರು ಮಕ್ಕಳಿದ್ದಾರೆ.