ನವದೆಹಲಿ: ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ 'ಇಂಡಿಯಾ' ಮೈತ್ರಿಕೂಟದ ಸದಸ್ಯರು ರಾಜ್ಯಸಭೆಯಲ್ಲಿ ನಿಯಮ 167ರ ಅಡಿ ಚರ್ಚೆಗೆ ಸಿದ್ಧವಿರುವ ಬಗ್ಗೆ ಕರಡು ಪ್ರತಿ ಸಲ್ಲಿಸಿದ ಬಳಿಕವಷ್ಟೇ ಚರ್ಚೆ ಆರಂಭಿಸಲಾಗುವುದು ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ನವದೆಹಲಿ: ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ 'ಇಂಡಿಯಾ' ಮೈತ್ರಿಕೂಟದ ಸದಸ್ಯರು ರಾಜ್ಯಸಭೆಯಲ್ಲಿ ನಿಯಮ 167ರ ಅಡಿ ಚರ್ಚೆಗೆ ಸಿದ್ಧವಿರುವ ಬಗ್ಗೆ ಕರಡು ಪ್ರತಿ ಸಲ್ಲಿಸಿದ ಬಳಿಕವಷ್ಟೇ ಚರ್ಚೆ ಆರಂಭಿಸಲಾಗುವುದು ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಕೇಂದ್ರ ಸಚಿವರಾದ ಪೀಯೂಷ್ ಗೋಯಲ್ ಮತ್ತು ಪ್ರಲ್ಹಾದ ಜೋಶಿ ಅವರು, ಗುರುವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಮೇಲ್ಮನೆಯಲ್ಲಿ ಸುಗಮ ಕಲಾಪಕ್ಕೆ ಸಹಕರಿಸುವಂತೆ ಕೋರಿದ್ದರು.
ಈ ಮೊದಲು ನಿಯಮ 267ರ ಅಡಿ ಸುದೀರ್ಘ ಚರ್ಚೆಗೆ ಪಟ್ಟು ಹಿಡಿದಿದ್ದ 'ಇಂಡಿಯಾ' ಸದಸ್ಯರು, ಬಳಿಕ ನಿಯಮ 167ರ ಅಡಿ ಚರ್ಚೆಗೆ ಸಿದ್ಧವಿದ್ದು ಪ್ರಧಾನಿ ನರೇಂದ್ರ ಮೋದಿ ಅವರು ಸದನದಲ್ಲಿ ಹೇಳಿಕೆ ನೀಡಬೇಕು ಎಂಬ ಬೇಡಿಕೆ ಮುಂದಿಟ್ಟಿದ್ದರು. ಇದಕ್ಕೆ ಕೇಂದ್ರ ಸರ್ಕಾರವೂ ತಾತ್ವಿಕ ಒಪ್ಪಿಗೆ ನೀಡಿತ್ತು.
'ಚರ್ಚೆಗೆ ಸಿದ್ಧವಿರುವ ಬಗ್ಗೆ ಕರಡು ಪ್ರತಿ ಸಲ್ಲಿಸುವಂತೆ ಸಚಿವರಾದ ಗೋಯಲ್ ಮತ್ತು ಜೋಶಿ ಅವರು, ವಿರೋಧ ಪಕ್ಷಗಳ ನಾಯಕರಿಗೆ ತಿಳಿಸಿದ್ದಾರೆ. ಆ ಬಳಿಕ ವಿಳಂಬ ಮಾಡದೆ ಚರ್ಚೆ ಆರಂಭಿಸಲಾಗುವುದು' ಎಂದು ಆಡಳಿತಾರೂಢ ಬಿಜೆಪಿ ನಾಯಕರೊಬ್ಬರು ತಿಳಿಸಿದ್ದಾರೆ.
ಪಶ್ಚಿಮ ಬಂಗಾಳದ ಹಿಂಸಾಚಾರ ಕುರಿತು ಚರ್ಚೆ:
'ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯ ಮಂಡನೆ ಕುರಿತು ಚರ್ಚೆ ನಡೆಯಲಿದೆ. ಈ ವೇಳೆ ಪಶ್ಚಿಮ ಬಂಗಾಳ ಮತ್ತು ರಾಜಸ್ಥಾನದಲ್ಲಿ ನಡೆದಿರುವ ಹಿಂಸಾಚಾರದ ಬಗ್ಗೆಯೂ ಚರ್ಚೆ ನಡೆಯುವ ಸಾಧ್ಯತೆ ಇದೆ. ಜೊತೆಗೆ, ಹಲವು ಮಸೂದೆಗಳನ್ನು ಮಂಡಿಸಿ ಅಂಗೀಕಾರ ಪಡೆಯಲಿದ್ದೇವೆ' ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಕೇಂದ್ರ ಸಚಿವರೊಬ್ಬರು ತಿಳಿಸಿದರು.
ರಾಜ್ಯಸಭೆಯಲ್ಲಿ ಸೋಮವಾರ ರಕ್ಷಣಾ ಅಂತರ್ ಸಂಘಟನೆಗಳ (ಆದೇಶ, ನಿಯಂತ್ರಣ ಮತ್ತು ಶಿಸ್ತು) ಮಸೂದೆ, ಐಐಎಂ (ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್) ತಿದ್ದುಪಡಿ ಮಸೂದೆ ಹಾಗೂ ರಾಷ್ಟ್ರ ರಾಜಧಾನಿ ಪ್ರದೇಶ ದೆಹಲಿ ಸರ್ಕಾರದ (ತಿದ್ದುಪಡಿ) ಮಸೂದೆ ಮಂಡನೆಯಾಗುವ ಸಾಧ್ಯತೆ ಇದೆ.