ಲಖಿಂಪುರ ಖೇರಿ: ದಲಿತ ಸಹೋದರಿಯರ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ಮತ್ತಿಬ್ಬರಿಗೆ ಆರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
2022 ಸೆಪ್ಟೆಂಬರ್ 14ರಂದು ನಿಘಾಸನ್‌ನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿತ್ತು. ಸಾಮೂಹಿಕ ಅತ್ಯಾಚಾರದ ನಂತರ, ದಲಿತ ಸಹೋದರಿಯರನ್ನು ಕೊಂದು ಮರಕ್ಕೆ ನೇಣು ಹಾಕಲಾಗಿತ್ತು. ಈ ಪ್ರಕರಣ ಸಂಬಂಧ ಎಡಿಜೆ ಕೋರ್ಟ್ ಅಪರಾಧಿಗಳಾದ ಜುನೈದ್ ಮತ್ತು ಸುನೀಲ್ ಅಲಿಯಾಸ್ ಛೋಟುಗೆ ಜೀವಾವಧಿ ಶಿಕ್ಷೆ ವಿಧಿಸಿದ್ದು ಕರೀಮುದ್ದೀನ್ ಮತ್ತು ಆರಿಫ್‌ಗೆ ತಲಾ ಆರು ವರ್ಷ ಶಿಕ್ಷೆ ವಿಧಿಸಲಾಗಿದೆ.
ಪ್ರಕರಣ ದಾಖಲಾದ ನಂತರ, ಪ್ರಕರಣದ ತನಿಖೆಗಾಗಿ ಎಸ್‌ಐಟಿ ರಚಿಸಲಾಗಿತ್ತು. ಘಟನೆ ನಡೆದ 14 ದಿನಗಳಲ್ಲಿ ಎಸ್‌ಐಟಿ ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿತ್ತು.
ಜುನೈದ್, ಸುನೀಲ್ ಅಲಿಯಾಸ್ ಛೋಟು, ಕರಿಮುದ್ದೀನ್ ಮತ್ತು ಆರಿಫ್ ಸೇರಿದಂತೆ ಆರು ಆರೋಪಿಗಳ ವಿರುದ್ಧ 2022ರ ಸೆಪ್ಟೆಂಬರ್ 28ರಂದು ಚಾರ್ಜ್ ಶೀಟ್ ಸಲ್ಲಿಸಿದ ಎಸ್‌ಐಟಿ ತ್ವರಿತ ತನಿಖೆ ನಡೆಸಿತ್ತು. ಸೆಪ್ಟೆಂಬರ್ 30 ರಂದು ಆರೋಪಿಗಳ ವಿರುದ್ಧ ಆರೋಪ ಸಾಬೀತುಪಡಿಸುವ ಸಾಕ್ಷಿಗಳನ್ನು ಹಾಜರುಪಡಿಸುವಂತೆ ಪ್ರಾಸಿಕ್ಯೂಷನ್‌ಗೆ ಕೋರ್ಟ್ ಸೂಚಿಸಿತು. ಅಕ್ಟೋಬರ್ 3ರಂದು ಪ್ರಾಸಿಕ್ಯೂಷನ್ ಮೃತ ಹದಿಹರೆಯದವರ ತಾಯಿಯನ್ನು ಮೊದಲ ಸಾಕ್ಷಿಯಾಗಿ ಹಾಜರುಪಡಿಸಿತು.
ಬಾಲಾಪರಾಧ ಮಂಡಳಿಯಲ್ಲಿ ಇಬ್ಬರು ಆರೋಪಿಗಳ ವಿಚಾರಣೆ
ಆರು ಆರೋಪಿಗಳ ವಿರುದ್ಧ ಎಸ್ಐಟಿ ಚಾರ್ಜ್ ಶೀಟ್ ಸಲ್ಲಿಸಿತ್ತು. ಇದರಲ್ಲಿ ಇಬ್ಬರು ಆರೋಪಿಗಳನ್ನು ಬಾಲಾಪರಾಧಿ ಎಂದು ನ್ಯಾಯಾಲಯ ಘೋಷಿಸಿದೆ. ಬಾಲಾಪರಾಧಿ ಎಂದು ಘೋಷಿಸಲಾದ ಒಬ್ಬ ಆರೋಪಿಯ ವಯಸ್ಸು 18 ವರ್ಷಕ್ಕಿಂತ ಕಡಿಮೆ ಮತ್ತು ಇನ್ನೊಬ್ಬರು 16 ವರ್ಷ ದಾಟಿತ್ತು. ಆದ್ದರಿಂದ, ಇತರ ನಾಲ್ವರು ಆರೋಪಿಗಳೊಂದಿಗೆ ಪೋಕ್ಸೊ ನ್ಯಾಯಾಲಯದಲ್ಲಿ ಅವರ ಪ್ರಕರಣವನ್ನು ವಿಚಾರಣೆ ನಡೆಸಲಾಯಿತು. ಆದರೆ ಬಾಲಾಪರಾಧಿ ಎಂದು ಘೋಷಿಸಲ್ಪಟ್ಟ ಎರಡು ಆರೋಪಿಯ ಪ್ರಕರಣವನ್ನು ಬಾಲಾಪರಾಧಿ ಮಂಡಳಿಗೆ ಕಳುಹಿಸಲಾಯಿತು.
ಈ ಘಟನೆ ರಾಜ್ಯಾದ್ಯಂತ ರಾಜಕೀಯ ಸಂಚಲನ ಮೂಡಿಸಿತ್ತು. ಬಾಲಕಿಯರ ಅಂತಿಮ ಸಂಸ್ಕಾರ ಮಾಡಲು ಹಿಂದೇಟು ಹಾಕಿದ ಹಿನ್ನೆಲೆಯಲ್ಲಿ ಸಂತ್ರಸ್ತ ಕುಟುಂಬಕ್ಕೆ ಎಲ್ಲ ಸೌಲಭ್ಯಗಳನ್ನು ಒದಗಿಸುವುದಾಗಿ ಸರ್ಕಾರ ಘೋಷಿಸಿತ್ತು. ಬಾಲಕಿಯರ ತಂದೆ ನೀಡಿದ ಮಾಹಿತಿಯಂತೆ, ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಬಾಲಕಿಯರ ಅಂತಿಮ ಸಂಸ್ಕಾರಕ್ಕಾಗಿ 25 ಲಕ್ಷ ರೂಪಾಯಿ ಆರ್ಥಿಕ ನೆರವು ಮತ್ತು ಒಂದು ಎಕರೆ ಜಮೀನು ಮತ್ತು ಶೌಚಾಲಯವನ್ನು ಕಟ್ಟಿಸಿಕೊಡುವುದಾಗಿ ತಿಳಿಸಿತ್ತು.