ನವದೆಹಲಿ: ಷೇರುಪಟ್ಟಿಗೆ ಸೇರಿರುವ ಸಂಸ್ಥೆಗಳಿಗೆ ಸಂಬಂಧಿಸಿದಂತೆ ವಿದೇಶಗಳಲ್ಲಿರುವ ನಿಧಿ ಮತ್ತು ಮಿತಿಯ ವಿವರಗಳ ಘೋಷಣೆಯಲ್ಲಿ ಅದಾನಿ ಸಮೂಹ ನಿಯಮಗಳನ್ನು ಉಲ್ಲಂಘಿಸಿರುವುದು ಸೆಬಿ ತನಿಖೆಯಿಂದ ಪತ್ತೆಯಾಗಿದೆ.
ನವದೆಹಲಿ: ಷೇರುಪಟ್ಟಿಗೆ ಸೇರಿರುವ ಸಂಸ್ಥೆಗಳಿಗೆ ಸಂಬಂಧಿಸಿದಂತೆ ವಿದೇಶಗಳಲ್ಲಿರುವ ನಿಧಿ ಮತ್ತು ಮಿತಿಯ ವಿವರಗಳ ಘೋಷಣೆಯಲ್ಲಿ ಅದಾನಿ ಸಮೂಹ ನಿಯಮಗಳನ್ನು ಉಲ್ಲಂಘಿಸಿರುವುದು ಸೆಬಿ ತನಿಖೆಯಿಂದ ಪತ್ತೆಯಾಗಿದೆ.
ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯ (ಸೆಬಿ) ಮೂಲಗಳು ಇದನ್ನು ದೃಢಪಡಿಸಿವೆ.
ಬಂದರು ವಹಿವಾಟಿನಿಂದ ವಿದ್ಯುತ್ ಉತ್ಪಾದನೆಯವರೆಗೂ ವಿವಿಧ ಉದ್ಯಮಗಳನ್ನು ಹೊಂದಿರುವ ಅದಾನಿ ಸಮೂಹವು ತನ್ನಿಂದ ಯಾವುದೇ ಲೋಪವಾಗಿಲ್ಲ ಎಂದು ಇದೇ ವರ್ಷದ ಜನವರಿ ತಿಂಗಳಲ್ಲಿ ಪ್ರತಿಪಾದಿಸಿತ್ತು.
ಹೆಸರು ಬಹಿರಂಗಪಡಿಸಲು ಬಯಸದ ಸೆಬಿ ಮೂಲಗಳು, 'ಸಮೂಹದಿಂದ ಆಗಿರುವ ಲೋಪ ತಾಂತ್ರಿಕ ಸ್ವರೂಪದ್ದಾಗಿದೆ. ತನಿಖೆಯು ಒಮ್ಮೆ ಪೂರ್ಣಗೊಂಡ ಬಳಿಕ ಈ ಕುರಿತಂತೆ ದಂಡವನ್ನು ವಿಧಿಸಬಹುದಾಗಿದೆ' ಎಂದು ತಿಳಿಸಿವೆ.
ಸುಪ್ರೀಂ ಕೋರ್ಟ್ ಸೆಬಿ ತನಿಖೆಯ ಮೇಲ್ವಿಚಾರಣೆ ನಡೆಸುತ್ತಿದ್ದು, ಮಂಗಳವಾರ ಪ್ರಕರಣದ ವಿಚಾರಣೆ ಕೈಗೆತ್ತಿಕೊಳ್ಳುತ್ತಿದೆ. ತನಿಖೆ ಪೂರ್ಣಗೊಳ್ಳುವವರೆಗೆ, ಈ ಕುರಿತ ವರದಿ ಬಹಿರಂಗಪಡಿಸುವ ಚಿಂತನೆ ಸೆಬಿಯ ಮುಂದಿಲ್ಲ ಎಂದು ಮೂಲಗಳು ತಿಳಿಸಿವೆ.
ಈ ಬೆಳವಣಿಗೆ ಕುರಿತಂತೆ ಸೆಬಿ ಅಥವಾ ಅದಾನಿ ಸಮೂಹ ಪ್ರತಿಕ್ರಿಯಿಸಲು ನಿರಾಕರಿಸಿದೆ. ಪ್ರಕರಣದ ತನಿಖೆಯು ಬಹುತೇಕ ಪೂರ್ಣಗೊಂಡಿದೆ ಎಂದು ಸೆಬಿ ಕಳೆದ ಶುಕ್ರವಾರ ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿತ್ತು.