ಕಾಸರಗೋಡು: ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಪ್ರದೇಶಗಳಲ್ಲಿ ಮಾದರಿ ವಸತಿ ಶಿಕ್ಷಣ ಶಾಲೆಗಳ ಸ್ಥಾಪನೆಯಿಂದ ಈ ಬಾರಿಯ ಎಸ್ಸೆಸೆಲ್ಸಿ-ಪ್ಲಸ್ ಟು ಪರೀಕ್ಷೆಯಲ್ಲಿ ಎಲ್ಲ ಮಾದರಿ ವಸತಿ ಶಾಲೆಗಳಲ್ಲಿ ಉತ್ತಮ ಫಲಿತಾಂಶದೊಂದಿಗೆ ಅವರಲ್ಲಿನ ಕಲಿಕಾ ಮಟ್ಟ ಸಉಧಾರಣೆಗೊಂಡಿರುವುದಾಗಿ ಪ. ಜಾತಿ, ಪ.ವರ್ಗ-ಹಿಂದುಳಿದ ವರ್ಗಗಳ ಕಲ್ಯಾಣ, ಮುಜರಾಯಿ ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಕೆ.ರಾಧಾಕೃಷ್ಣನ್ ತಿಳಿಸಿದ್ದಾರೆ.
ಅವರು ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಇಲಾಖೆ ವತಿಯಿಂದ ವಲಯಪರಂಬದಲ್ಲಿ ನಿರ್ಮಿಸುತ್ತಿರುವ ಸಾವಿತ್ರಿಭಾಯಿ ಫುಲೆ ಸ್ಮಾರಕ ವಸತಿ ಶಾಲಾ ಕಟ್ಟಡದ ಶಿಲಾನ್ಯಾಸ ನಡೆಸಿ ಮಾತನಾಡಿದರು. ಮಾದರಿ ವಸತಿ ಶಾಲೆಗಳ ಶಿಕ್ಷಣ ಹಾಗೂ ಸಾಮಾಜಿಕ ಮನ್ನಣೆಯಿಂದ ವಂಚಿತರಾಗಿದ್ದ ಸಮುದಾಯವನ್ನು ಉತ್ತಮ ಶಿಕ್ಷಣ ನೀಡುವ ಮೂಲಕ ಮುಖ್ಯವಾಹಿನಿಗೆ ತರಲಾಗಿದೆ. ರಾಜ್ಯದಲ್ಲಿ 32 ಮಾದರಿ ವಸತಿ ಶಾಲೆಗಳು ಚಟುವಟಿಕೆ ನಡೆಸುತ್ತಿದೆ ಎಂದು ತಿಳಿಸಿದರು.
ಶಾಸಕ ಸಿ.ಎಚ್.ಕುಞಂಬು ಅಧ್ಯಕ್ಷತೆ ವಹಿಸಿದ್ದರು. ವಲಿಯಪರಂಬದಲ್ಲಿ ಮಂಜೂರಾದ ಹತ್ತು ಎಕರೆ ಜಾಗದಲ್ಲಿ ಕಟ್ಟಡ ನಿರ್ಮಾಣವಾಗುತ್ತಿದೆ. 2017ರಿಂದ ಆಶ್ರಮ ಶಾಲೆಯು ಕುಂಡಂಕುಳಿಯಲ್ಲಿ ಬೇಡಡ್ಕ ಮೆಟ್ರಿಕ್ ಪೂರ್ವ ಹಾಸ್ಟೆಲ್‍ಗೆ ಮಂಜೂರಾದ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಹೊಸ ಕಟ್ಟಡಕ್ಕಾಗಿ 7.5 ಕೋಟಿ ರೂ. ಮಂಜೂರುಗೊಳಿಸಲಾಗಿದೆ. ಬ್ಲಾಕ್ ಪಂಚಾಯಿತಿ ಉಪಾಧ್ಯಕ್ಷೆ ಕೆ.ರಮಣಿ, ಬೇಡಡ್ಕ ಗ್ರಾಪಂ ಅಧ್ಯಕ್ಷೆ ಎಂ.ಧನ್ಯ, ಕುತ್ತಿಕೋಲ್ ಗ್ರಾ.ಪಂ ಅಧ್ಯಕ್ಷ ಎಚ್.ಮುರಳಿ ಪಯ್ಯಂಗಾನಂ, ಬೇಡಡ್ಕ ಗ್ರಾಪಂ ಉಪಾಧ್ಯಕ್ಷ ಎ.ಮಾಧವನ್, ಪಂಚಾಯಿತಿ ಸದಸ್ಯ ಎಂ.ತಂಬಾನ್, ಜಿಲ್ಲಾ ಯೋಜನಾ ಸಮಿತಿ ಸರ್ಕಾರಿ ನಾಮನಿರ್ದೇಶಿತ ಸಿ.ರಾಮಚಂದ್ರನ್, ರಾಜ್ಯ ಪರಿಶಿಷ್ಟ ಪಂಗಡ ಸಲಹಾ ಸಮಿತಿ ಸದಸ್ಯ ಗೋಪಿ ಖುರ್ತಿಕಲ್, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು. ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಕೆ.ಕೃಷ್ಣ ಪ್ರಕಾಶ್ ಸ್ವಾಗತಿಸಿದರು. ಗಿರಿಜನ ಅಭಿವೃದ್ಧಿ ಅಧಿಕಾರಿ ಎಂ.ಮಲ್ಲಿಕಾ ವಂದಿಸಿದರು.