ನವದೆಹಲಿ: ಬಾಲಕಿ ಮೇಲೆ ಹಲವು ಬಾರಿ ಅತ್ಯಾಚಾರ ನಡೆಸಿ, ಆಕೆ ಗರ್ಭ ಧರಿಸಲು ಕಾರಣನಾದ ಪ್ರಕರಣದ ಆರೋಪಿ ದೆಹಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ (ಡಬ್ಲ್ಯುಸಿಡಿ) ಪ್ರೇಮೋದಯ್ ಖಾಖಾ ಬಂಧನವಾಗುವುದಕ್ಕೂ ಕೆಲವು ಕ್ಷಣಗಳ ಮುನ್ನ ಪತ್ನಿ ಸಹಿತ ಪರಾರಿಯಾಗಲು ಪ್ರಯತ್ನಿಸಿರುವುದು ಸಿ.ಸಿ ಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ ಎಂದು ಮೂಲಗಳು ಮಂಗಳವಾರ ತಿಳಿಸಿವೆ.
ಖಾಖಾ ಮತ್ತು ಅವರ ಪತ್ನಿ ಸೀಮಾರಾಣಿ ಸೋಮವಾರ ವಕೀಲರೊಬ್ಬರನ್ನು ಭೇಟಿ ಮಾಡಲು ತೆರಳುತ್ತಿರುವುದು ಹಾಗೂ ಬಂಧನಕ್ಕೂ ಮುನ್ನವೇ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಪಡೆಯಲು ಯೋಜಿಸಿದ್ದರು ಎಂದು ಮೂಲಗಳು ತಿಳಿಸಿವೆ.
'ಖಾಖಾ ದಂಪತಿ ಬುರಾರಿ ಪ್ರದೇಶದ ಶಕ್ತಿ ಎನ್‌ಕ್ಲೇವ್‌ನ ನಿವಾಸಿಗಳು. ಬಾಲಕಿಯ ತಂದೆಯು 2020ರ ಅ. 1ರಂದು ನಿಧನರಾಗಿದ್ದು, ಖಾಖಾ ಮನೆಯಲ್ಲಿ ವಾಸವಿದ್ದಳು' ಎಂದು ಪೊಲೀಸರು ತಿಳಿಸಿದ್ದಾರೆ.
ಖಾಖಾ ಅವರನ್ನು ಬಂಧಿಸುವ ಮುನ್ನ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪ ನಿರ್ದೇಶಕ ಸ್ಥಾನದಿಂದ ಅವರನ್ನು ವಜಾಗೊಳಿಸುವಂತೆ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಆಗಸ್ಟ್ 13ರಂದು ಖಾಖಾ ಅವರ ವಿರುದ್ಧ ದೂರು ದಾಖಲಾಗಿತ್ತು.
'ನವೆಂಬರ್ 2020ರಿಂದ ಜನವರಿ 2021ರ ಅವಧಿಯಲ್ಲಿ ಬಾಲಕಿ ಮೇಲೆ ಹಲವು ಬಾರಿ ಅತ್ಯಾಚಾರ ನಡೆಸಿದ ಆರೋಪದ ಮೇಲೆ ಖಾಖಾ ವಿರುದ್ಧ ಪ್ರಕರಣ ದಾಖಲಾಗಿದೆ. ಬಾಲಕಿಗೆ ಗರ್ಭಪಾತದ ಔಷಧ ನೀಡಿದ ಆರೋಪದ ಮೇಲೆ ಆರೋಪಿಯ ಪತ್ನಿಯನ್ನೂ ವಶಕ್ಕೆ ಪಡೆಯಲಾಗಿದೆ' ಎಂದೂ ಪೊಲೀಸರು ತಿಳಿಸಿದ್ದಾರೆ.
ಈ ನಡುವೆ ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಾಲೀವಾಲ್ ಅವರು ಸೇಂಟ್ ಸ್ಟೀಫನ್ಸ್ ಆಸ್ಪತ್ರೆಯ ಎದುರು ನಡೆಸುತ್ತಿದ್ದ ತಮ್ಮ ಧರಣಿಯನ್ನು ಮಂಗಳವಾರ ಹಿಂಪಡೆದಿದ್ದಾರೆ. ಬಾಲಕಿಯ ಭೇಟಿಗೆ ಒತ್ತಾಯಿಸಿ ಅವರು ಸೋಮವಾರ ಬೆಳಿಗ್ಗೆಯಿಂದ ಧರಣಿ ಕೈಗೊಂಡಿದ್ದರು. ಆದರೆ, ಮಂಗಳವಾರ ಮಧ್ಯಾಹ್ನ ಬಾಲಕಿಯನ್ನು ಭೇಟಿ ಮಾಡದೇ ಅವರು ಆಸ್ಪತ್ರೆಯಿಂದ ಹೊರಬಂದರು.
'ಸಂತ್ರಸ್ತೆಯು ಇನ್ನೂ ಆಸ್ಪತ್ರೆಯ ನಿಗಾದಲ್ಲಿರುವುದರಿಂದ ಆಕೆಯ ತಾಯಿಯು ಯಾರನ್ನೂ ಭೇಟಿಯಾಗಲು ಬಯಸುತ್ತಿಲ್ಲ' ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸೀಮಾರಾಣಿ ಖಾಖಾ ಅವರನ್ನು ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ವಶದಲ್ಲಿರಿಸಲಾಗಿದೆ. ಖಾಖರ್ ಅವರನ್ನು ಮಂಗಳವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ ಎಂದು ಡಿಸಿಪಿ (ಉತ್ತರ) ಸಾಗರ್ ಸಿಂಗ್ ಕಲ್ಸಿ ಮಾಹಿತಿ ನೀಡಿದ್ದಾರೆ.