ನವದೆಹಲಿ: ಪರಿಸರಕ್ಕೆ ಒಮ್ಮೆ ಹಾನಿಯಾದರೆ ಮತ್ತೆ ಅದನ್ನು ಸರಿಪಡಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ, ಕುಲಾಂತರಿ ಸಾಸಿವೆಯನ್ನು ತೆರೆದ ಪರಿಸರದಲ್ಲಿ ಬೆಳೆದು ಪರೀಕ್ಷೆಗೆ ಒಳಪಡಿಸಲು ಕೇಂದ್ರ ಸರ್ಕಾರ ಮುಂದಾಗಬಾರದು ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ.
ಕುಲಾಂತರಿ ತಳಿ ಪರಿಶೀಲನಾ ಸಮಿತಿಯು (ಜಿಇಎಸಿ) ಸಾಸಿವೆ ತಳಿ ಡಿಎಂಎಚ್-11 ಅನ್ನು ಪರೀಕ್ಷೆಗೆ ಒಳಪಡಿಸಲು ಅನುಮತಿ ನೀಡುವಂತೆ ಕೇಂದ್ರಕ್ಕೆ ಶಿಫಾರಸು ಮಾಡಿತ್ತು.
'ಪರೀಕ್ಷೆಗೆ ಸಂಬಂಧಿಸಿದಂತೆ ಅಂತಿಮ ನಿರ್ಧಾರ ಕೈಗೊಂಡಿಲ್ಲ' ಎಂದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ 2022ರ ನವೆಂಬರ್‌ನಲ್ಲಿ ನಡೆದ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ನ ಮುಂದೆ ಕೇಂದ್ರವು ಹೇಳಿಕೆ ನೀಡಿತ್ತು.
ಪರಿಸರ ಸಂರಕ್ಷಣೆ ಮುಖ್ಯ: ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಹಾಗೂ ಉಜ್ಜಲ್ ಭುಯಾನ್ ಅವರಿದ್ದ ವಿಭಾಗೀಯ ನ್ಯಾಯಪೀಠವು, ಮಂಗಳವಾರ ಈ ಅರ್ಜಿಯ ವಿಚಾರಣೆ ನಡೆಸಿತು.
ಕೇಂದ್ರದ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ ಅವರು, 'ಕುಲಾಂತರಿ ಸಾಸಿವೆ ಬಗ್ಗೆ ಹನ್ನೆರಡು ವರ್ಷಗಳಿಂದ ಸಂಶೋಧನೆ ನಡೆಯುತ್ತಿದೆ. ಈಗ ತೆರೆದ ಪರಿಸರದ ವಿಭಿನ್ನ ಸನ್ನಿವೇಶದಲ್ಲಿ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ' ಎಂದ ಅವರು, ಮುಂಬರುವ ಬಿತ್ತನೆ ಕಾಲ ಹಾಗೂ ಖಾದ್ಯ ತೈಲದ ಬೇಡಿಕೆ ಕುರಿತು ಪೀಠದ ಗಮನ ಸೆಳೆಯಲು ಮುಂದಾದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯ ಪೀಠವು, 'ಯಾವುದೇ ಪರೀಕ್ಷೆ ಮಾಡದಂತೆ ಸ್ಪಷ್ಟವಾಗಿ ಸೂಚಿಸಿದ್ದೇವೆ. ಹಾಗಿದ್ದರೂ ಮತ್ತೆ ಯಾವ ವಿಷಯ ಪ್ರಸ್ತಾಪಿಸುತ್ತೀರಿ' ಎಂದು ಖಾರವಾಗಿ ಪ್ರಶ್ನಿಸಿತು.
ಅರ್ಜಿದಾರರ ಪರ ಹಾಜರಿದ್ದ ವಕೀಲ ಪ್ರಶಾಂತ್ ಭೂಷಣ್, 'ತೆರೆದ ಪರಿಸರದಲ್ಲಿ ಪರೀಕ್ಷೆ ಒಳಪಡಿಸುವುದು ಎಂದರೆ ನಿಸರ್ಗದಲ್ಲಿಯೇ ಬೆಳೆಯುವುದಾಗಿದೆ. ಪರೀಕ್ಷೆಗೆ ಒಳಪಡಿಸಲು ಅಪೇಕ್ಷಿಸಿದರೆ ಗ್ರೀನ್ ಹೌಸ್ ವಾತಾವರಣದಲ್ಲಿ ಬೆಳೆಯುವುದು ಉತ್ತಮ. ಇಲ್ಲವಾದರೆ ಅದು ಪರಿಸರ ಮಾಲಿನ್ಯಕ್ಕೆ ಕಾರಣವಾಗಲಿದೆ. ಜೊತೆಗೆ, ಸ್ಥಳೀಯ ತಳಿಗಳ ಮೇಲೂ ಪರಿಣಾಮ ಬೀರುತ್ತದೆ' ಎಂದು ಪೀಠದ ಗಮನ ಸೆಳೆದರು.
'ನಿಸರ್ಗ ಹಾಗೂ ಜೀವ ಪರಿಸರದ ನಿರ್ವಹಣೆ ಅತಿಮುಖ್ಯವಾದುದು. ಇಡೀ ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳಲು ಸಮಯ ಬೇಕಿದೆ' ಎಂದು ಹೇಳಿದ ನ್ಯಾಯಪೀಠವು, ಸೆಪ್ಟೆಂಬರ್ 26ಕ್ಕೆ ವಿಚಾರಣೆಯನ್ನು ಮುಂದೂಡಿತು.
ಕುಲಾಂತರಿ ತಳಿ ಪರಿಶೀಲನಾ ಸಮಿತಿಯು 2022ರ ಅಕ್ಟೋಬರ್ 18ರಂದು ತೆರೆದ ಪರಿಸರದಲ್ಲಿ ಪರೀಕ್ಷೆ ನಡೆಸಲು ಅನುಮತಿ ನೀಡುವಂತೆ ಶಿಫಾರಸು ಮಾಡಿತ್ತು. ಅಕ್ಟೋಬರ್ 25ರಂದು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯವು ಇದಕ್ಕೆ ಅನುಮೋದನೆ ನೀಡಿತ್ತು.