ಕಾಸರಗೋಡು : ಸಂಸ್ಕøತ ಅಧ್ಯಾಪಕ ಫೆಡರೇಶನ್ ಕುಂಬಳೆ(ಕೆಎಸ್‍ಟಿಎಫ್ ಡಿ)ಉಪ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ವಿವಿಧ ಬೇಡಿಕೆ ಮುಂದಿರಿಸಿ ಉಪಜಿಲ್ಲಾ ವಿದ್ಯಾಭ್ಯಾಸ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಹಲವು ವರುಷಗಳಿಂದ ಸಂಸ್ಕೃತ ವಿದ್ಯಾರ್ಥಿಗಳಿಗಾಗಿ ನಡೆಸಿಕೊಂಡು ಬರುತ್ತಿರುವ ಸಂಸ್ಕೃತೋತ್ಸವನ್ನು ರದ್ದುಮಾಡುವ ಸಂಚು ಕೈಬಿಡಬೇಕು, ಎಲ್.ಪಿ ವಿಭಾಗದಲ್ಲಿ ಸಂಸ್ಕೃತ ಹುದ್ದೆಯನ್ನು ಮಂಜೂರು ಗೊಳಿಸಬೇಕು, ಸಂಸ್ಕೃತ ಸ್ಕಾಲರ್‍ಶಿಪ್ ಮೊತ್ತವನ್ನು ಕಾಲಾಕಾಲಕ್ಕೆ ಹೆಚ್ಚಿಸುವುದು, ಸಂಸ್ಕೃತ ಸ್ಪೆಷಲ್ ಆಫೀಸರ್ ಹುದ್ದೆಗೆ ತಕ್ಷಣವೇ ನೇಮಕಾತಿ ನಡೆಸುವುದು ಮೊದಲಾದ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕೇರಳದ ಎಲ್ಲಾ ಸಂಸ್ಕೃತ ಅಧ್ಯಾಪಕರು ಮುಷ್ಕರ ರಂಗಕ್ಕೆ ಇಳಿದಿದ್ದಾರೆ.
ಸಂಸ್ಕೃತೋತ್ಸವ,ಆರೇಬಿಕ್ ಕಲೋತ್ಸವಗಳನ್ನು ಈ ಹಿಂದೆ ನಡೆಸಿಕೊಂಡು ಬಂದ ರೀತಿಯಲ್ಲಿ ನಡೆಸಬೇಕೆಂಬ ಪ್ರಮುಖ ಬೇಡಿಕೆಯನ್ನು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಸಂಸ್ಕೃತ ಅಧ್ಯಾಪಕ ಫೆಡರೇಶನ್ ಕುಂಬಳೆ ಉಪಜಿಲ್ಲೆಯ ಸಂಘದ ಅಧ್ಯಕ್ಷೆ ಅನಿತಾ ಟೀಚರ್ ಇವರ ನೇತೃತ್ವದಲ್ಲಿ ವಿದ್ಯಾಧಿಕಾರಿಗಳಿಗೆ ಮನವಿ ಸಮರ್ಪಿಸಲಾಯಿತು. ಜಿಲ್ಲಾ ಮತ್ತು ಉಪ ಜಿಲ್ಲಾ ಸಂಘ ಸದಸ್ಯರಾದ ವೆಂಕಟ ಕೃಷ್ಣ ಭಟ್, ರಂಜಿತ್, ಪ್ರವೀಣ್ ಕುಮಾರ್ ಅಡಿಗೆ, ನಂದಕುಮಾರ್, ಮೋಹನ ಚಂದ್ರ ಡಿ ಮೊದಲಾದವರು ಉಪಸ್ಥಿತರಿದ್ದರು.