ನವದೆಹಲಿ: ಸಂವಿಧಾನದ 370ನೇ ವಿಧಿಯಡಿ ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿದ ಕೇಂದ್ರ ಸರ್ಕಾರದ ನಿರ್ಧಾರ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ಸುಪ್ರೀಂಕೋರ್ಟ್‌ನಲ್ಲಿ ಗುರುವಾರವೂ ಮುಂದುವರಿಯಿತು.
ನವದೆಹಲಿ: ಸಂವಿಧಾನದ 370ನೇ ವಿಧಿಯಡಿ ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿದ ಕೇಂದ್ರ ಸರ್ಕಾರದ ನಿರ್ಧಾರ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ಸುಪ್ರೀಂಕೋರ್ಟ್‌ನಲ್ಲಿ ಗುರುವಾರವೂ ಮುಂದುವರಿಯಿತು.
'ಜಮ್ಮು-ಕಾಶ್ಮೀರಕ್ಕೆ ತಾತ್ಕಾಲಿಕವಾಗಿ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಲು ತನಗಿರುವ ಪೂರ್ಣ ಅಧಿಕಾರವನ್ನು ಸಂಸತ್ ಚಲಾಯಿಸಬಾರದಿತ್ತು ಎಂದು ಹೇಗೇ ಹೇಳಬಹುದು' ಎಂದು ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಐವರು ಸದಸ್ಯರಿರುವ ನ್ಯಾಯಪೀಠವು ಅರ್ಜಿದಾರರನ್ನು ಪ್ರಶ್ನಿಸಿತು.
ನ್ಯಾಷನಲ್ ಕಾನ್ಫರೆನ್ಸ್ ನಾಯಕ ಮೊಹಮ್ಮದ್ ಅಕ್ಬರ್ ಲೋನ್ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, 'ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿರುವ ರೀತಿಯಲ್ಲಿ ಅಧಿಕಾರವನ್ನು ಚಲಾಯಿಸಬಾರದಿತ್ತು' ಎಂದು ನ್ಯಾಯಪೀಠಕ್ಕೆ ತಿಳಿಸಿದರು.
'ಯಾವುದೋ ಒಂದು ಕಾಲಘಟ್ಟದಲ್ಲಿ ಈ ವಿಶೇಷ ಸವಲತ್ತನ್ನು ಹಿಂಪಡೆಯಬಹುದಿತ್ತು. ಆದರೆ, ಸಾಂವಿಧಾನಿಕ ಮಾರ್ಗ ಅನುಸರಿಸಿಯೇ ಇಂತಹ ನಿರ್ಧಾರ ಕೈಗೊಳ್ಳಬೇಕು' ಎಂದು ಪ್ರತಿಪಾದಿಸಿದರು.
'370ನೇ ವಿಧಿಯಡಿ ನೀಡಲಾದ ವಿಶೇಷ ಸ್ಥಾನಮಾನವನ್ನು ಹಿಂಪಡೆಯುವುದಕ್ಕೆ ಸಂಬಂಧಿಸಿ ತಿದ್ದುಪಡಿ ತರಲು ಸಂಸತ್ ತನಗಿರುವ ಅಧಿಕಾರವನ್ನು ಚಲಾಯಿಸಬಾರದು ಎಂದು ನೀವು ಹೇಗೆ ಹೇಳುತ್ತೀರಿ' ಎಂದು ನ್ಯಾಯಪೀಠ ಮತ್ತೆ ಪ್ರಶ್ನಿಸಿತು.
ತಮ್ಮ ವಾದವನ್ನು ಪುನರುಚ್ಚರಿಸಿದ ಸಿಬಲ್, 'ಕೇಂದ್ರ ಸರ್ಕಾರದ್ದು ರಾಜಕೀಯ ನಡೆಯಾಗಿತ್ತು. ಆ ರೀತಿಯಲ್ಲಿ ನಿರ್ಧಾರ ಕೈಗೊಳ್ಳಲು ಸಂವಿಧಾನದಲ್ಲಿ ಅವಕಾಶ ಇಲ್ಲ' ಎಂದರು.
ಇದೇ ವಿಚಾರವಾಗಿ 20 ಅರ್ಜಿಗಳು ಸಲ್ಲಿಕೆಯಾಗಿದ್ದು, ಮಂಗಳವಾರ ವಿಚಾರಣೆ ಮುಂದುವರಿಯಲಿದೆ.