ಬರೇಲಿ: ಕಿರುಕುಳಕ್ಕೆ ಪ್ರತಿರೋಧ ವ್ಯಕ್ತಪಡಿಸಿದ 16 ವರ್ಷದ ವಿದ್ಯಾರ್ಥಿನಿಗೆ ಸ್ಯಾನಿಟೈಸರ್ ಕುಡಿಸಿ ಕೊಂದಿರುವ ಘಟನೆ ಉತ್ತರದ ಪ್ರದೇಶದ ಬರೇಲಿ ಜಿಲ್ಲೆಯ ಲಕ್ಷ್ಮೀಪುರದಲ್ಲಿ ನಡೆದಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಜುಲೈ 27ರಂದು ಹನ್ನೊಂದನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿ, ಕಾಲೇಜು ಮುಗಿಸಿ ಮನೆಗೆ ಮರಳುತ್ತಿದ್ದ ವೇಳೆ ಪ್ರಮುಖ ಆರೋಪಿ ಉದೇಶ್ ರಥೋರ್(21) ಸೇರಿದಂತೆ ಮೂವರು ವ್ಯಕ್ತಿಗಳು ಆಕೆಗೆ ಕಿರುಕುಳ ನೀಡಲು ಪ್ರಯತ್ನಿಸಿದ್ದಾರೆ.
ಇದಕ್ಕೆ ವಿರೋಧ ವ್ಯಕ್ತಪಡಿಸಿದ ಸಂತ್ರಸ್ತೆಗೆ ಬಲವಂತವಾಗಿ ಸ್ಯಾನಿಟೈಸರ್ ಕುಡಿಸಿದ್ದಾರೆ ಎಂದು ಹೇಳಿದ್ದಾರೆ
ಘಟನೆಯ ವೇಳೆ ಸಂತ್ರಸ್ತೆಯ ಸಹೋದರ ಮಧ್ಯಪ್ರವೇಶಿಸಲು ಪ್ರಯತ್ನಿಸಿದಾಗ ಆರೋಪಿಗಳು ಆತನಿಗೆ ಥಳಿಸಿದ್ದಾರೆ. ಈ ಕೃತ್ಯವನ್ನು ವಿಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಸಂತ್ರಸ್ತೆಯನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಆಕೆ ಮೃತಪಟ್ಟಿದ್ದಾರೆಂದು ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಭಾಟಿ ಮಾಹಿತಿ ನೀಡಿದ್ದಾರೆ.
ಮರಣೋತ್ತರ ಪರೀಕ್ಷೆಯ ವರದಿಯಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಭಾಟಿ ಹೇಳಿದ್ದಾರೆ.