ನವದೆಹಲಿ: ರಾಷ್ಟ್ರೀಯ ಶೈಕ್ಷಣಿಕ ಸಂಶೋಧನಾ ಮತ್ತು ತರಬೇತಿ ಮಂಡಳಿಯು (ಎನ್‌ಸಿಇಆರ್‌ಟಿ) 3ರಿಂದ 12ನೇ ತರಗತಿವರೆಗಿನ ಸಿಬಿಎಸ್‌ಇ ಪಠ್ಯಕ್ರಮ ಹಾಗೂ ಪಠ್ಯಪುಸ್ತಕಗಳ ಪರಿಷ್ಕರಣೆಗೆ ಹೊಸ ಸಮಿತಿಯನ್ನು ರಚಿಸಿದೆ.
ಲೇಖಕಿ ಹಾಗೂ ಇನ್ಫೊಸಿಸ್ ಫೌಂಡೇಷನ್ ಅಧ್ಯಕ್ಷೆ ಸುಧಾ ಮೂರ್ತಿ, ಗಾಯಕ ಶಂಕರ್ ಮಹಾದೇವನ್, ಆರ್ಥಿಕ ತಜ್ಞ ಸಂಜೀವ್ ಸನ್ಯಾಲ್ ಅವರು ಈ ರಾಷ್ಟ್ರೀಯ ಪಠ್ಯಕ್ರಮ ಮತ್ತು ಬೋಧನಾ ಕಲಿಕಾ ಸಾಮಗ್ರಿ ಸಮಿತಿಯ (ಎನ್‌ಎಸ್‌ಟಿಸಿ) ಸದಸ್ಯರಾಗಿದ್ದಾರೆ.
ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷ್ಯಾಂತದ ಒಳಗೆ ಪಠ್ಯಪುಸ್ತಕ ರಚನೆಯ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ನಿರ್ಧರಿಸಲಾಗಿದೆ. ಮುಂದಿನ ಶೈಕ್ಷಣಿಕ ವರ್ಷದ ಆರಂಭದ ವೇಳೆಗೆ ವಿದ್ಯಾರ್ಥಿಗಳಿಗೆ ಹೊಸ ಪಠ್ಯಪುಸ್ತಕಗಳನ್ನು ಪೂರೈಸುವ ಹೊಣೆಯನ್ನು ಸಮಿತಿಗೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕಳೆದ ಮೇ ತಿಂಗಳಿನಲ್ಲಿ ಎನ್‌ಸಿಇಆರ್‌ಟಿ ಪಠ್ಯಕ್ರಮದ ವಿವಿಧ ತರಗತಿಯ ಪಠ್ಯಪುಸ್ತಕಗಳಲ್ಲಿ ಹಲವು ವಿಷಯಗಳು ಹಾಗೂ ಅಧ್ಯಾಯಗಳನ್ನು ಕೈಬಿಡಲಾಗಿತ್ತು. ಬಿಜೆಪಿ ನೇತೃತ್ವದ ಸರ್ಕಾರವು ಪ್ರತೀಕಾರಕ್ಕೆ ಇಳಿದಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿದ್ದವು.
ಪಠ್ಯವನ್ನು ತರ್ಕಬದ್ಧಗೊಳಿಸುವ ನಿಟ್ಟಿನಲ್ಲಿ ಈ ಕ್ರಮಕೈಗೊಳ್ಳಲಾಗಿದೆ. ಪಠ್ಯಪುಸ್ತಕಗಳಲ್ಲಿ ಉದ್ದೇಶ ಪೂರ್ವಕವಲ್ಲದ ಕೆಲವು ಲೋಪಗಳಿವೆ. ಪರಿಣತರ ಶಿಫಾರಸು ಅನ್ವಯ ಇದನ್ನು ಸರಿಪಡಿಸಲಾಗುತ್ತದೆ ಎಂದು ಎನ್‌ಸಿಇಆರ್‌ಟಿ ಸ್ಪಷ್ಟಪಡಿಸಿತ್ತು.
ಒಟ್ಟು 19 ಸದಸ್ಯರನ್ನು ಒಳಗೊಂಡಿರುವ ಈ ಸಮಿತಿಯು 3ರಿಂದ 12ನೇ ತರಗತಿವರೆಗೆ ಪಠ್ಯಕ್ರಮ, ಪಠ್ಯಪುಸ್ತಕಗಳು ಹಾಗೂ ಕಲಿಕಾ ಪರಿಕರಗಳನ್ನು ಅಂತಿಮಗೊಳಿಸಲಿದೆ. ರಾಷ್ಟ್ರೀಯ ಶಿಕ್ಷಣ ಯೋಜನೆ ಮತ್ತು ಆಡಳಿತಾತ್ಮಕ (ಎನ್‌ಐಇಪಿಎ) ಕುಲಪತಿ ಎಂ.ಸಿ. ಪಂತ್ ಅವರು ಈ ಸಮಿತಿಯ ಅಧ್ಯಕ್ಷರಾಗಿದ್ದಾರೆ ಎಂದು ತಿಳಿಸಿದೆ.
ದೇಶದಾದ್ಯಂತ ರಾಷ್ಟ್ರೀಯ ಶಿಕ್ಷಣ ನೀತಿಯ (ಎನ್‌ಇಪಿ) 2020ರ ಅನುಷ್ಠಾನಕ್ಕೆ ಕೇಂದ್ರ ಸರ್ಕಾರವು ಕೆ. ಕಸ್ತೂರಿರಂಗನ್ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿತ್ತು. ಈ ಸಮಿತಿಯು ಶಾಲಾ ಶಿಕ್ಷಣಕ್ಕಾಗಿ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (ಎನ್‌ಸಿಎಫ್-ಎಸ್‌ಇ) ರಚಿಸಿದೆ. ಈಗಾಗಲೇ, ಕೇಂದ್ರ ಶಿಕ್ಷಣ ಸಚಿವಾಲಯಕ್ಕೆ ಈ ಕುರಿತು ಕರಡು ಸಲ್ಲಿಸಲಾಗಿದ್ದು, ಏಪ್ರಿಲ್‌ನಲ್ಲಿ ಬಿಡುಗಡೆಯನ್ನೂ ಮಾಡಲಾಗಿದೆ. ಇದರ ಅನ್ವಯವೇ ಸಮಿತಿಯ ಸದಸ್ಯರು ಪಠ್ಯಕ್ರಮ ಪರಿಷ್ಕರಣೆಯ ಕೆಲಸ ನಿರ್ವಹಿಸಲಿದ್ದಾರೆ.
ಸಮಿತಿಯ ಜವಾಬ್ದಾರಿ ಏನು?:
ಎನ್‌ಎಸ್‌ಟಿಸಿ ಸಮಿತಿಗೆ ಪಠ್ಯಕ್ರಮ, ಬೋಧನೆ ಹಾಗೂ ಕಲಿಕಾ ಸಾಮಗ್ರಿಗಳನ್ನು ಸಿದ್ಧಪಡಿಸುವ ಜವಾಬ್ದಾರಿ ನೀಡಲಾಗಿದೆ. ಅಲ್ಲದೇ, ಈ ಸಮಿತಿಯು ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿಗೆ ಅನುಗುಣವಾಗಿಯೇ ಒಂದು ಮತ್ತು ಎರಡನೇ ತರಗತಿಯ ಹಾಲಿ ಪಠ್ಯಪುಸ್ತಕಗಳಲ್ಲಿ ಕೆಲವು ಸೂಕ್ಷ್ಮ ಪರಿಷ್ಕರಣೆ ಕಾರ್ಯವನ್ನೂ ಮಾಡಲಿದೆ ಎಂದು ಎನ್‌ಸಿಇಆರ್‌ಟಿಯ ಆಂತರಿಕ ಟಿಪ್ಪಣಿಯಲ್ಲಿ ವಿವರಿಸಲಾಗಿದೆ.
ಪಠ್ಯಪುಸ್ತಕಗಳು ಹಾಗೂ ಇತರೆ ಕಲಿಕಾ ಸಾಮಗ್ರಿಗಳನ್ನು ಈ ಸಮಿತಿಯು ಅಂತಿಮಗೊಳಿಸಲಿದೆ. ಬಳಿಕ ಎನ್‌ಸಿಇಆರ್‌ಟಿಯು ಹೊಸ ಪಠ್ಯಪುಸ್ತಕಗಳನ್ನು ಮುದ್ರಿಸಿ ವಿತರಿಸಲಿದೆ.
ಸಮಿತಿಯಲ್ಲಿ ಯಾರಿದ್ದಾರೆ?:
ಪ್ರಿನ್ಸಟನ್ ವಿಶ್ವವಿದ್ಯಾಲಯದ ಗಣಿತ ಪ್ರಾಧ್ಯಾಪಕ ಮಂಜುಲ್ ಭಾರ್ಗವ್ ಈ ಸಮಿತಿಯ ಉಪಾಧ್ಯಕ್ಷರಾಗಿದ್ದಾರೆ. ಉಳಿದಂತೆ ಗಣಿತಶಾಸ್ತ್ರಜ್ಞೆ ಸುಜಾತಾ ರಾಮದೊರೈ, ಬ್ಯಾಡ್ಮಿಂಟನ್ ಆಟಗಾರ ಯು. ವಿಮಲ್‌ಕುಮಾರ್, ಕೇಂದ್ರ ನೀತಿ ಅಧ್ಯಯನಗಳ ಸಂಸ್ಥೆಯ ಅಧ್ಯಕ್ಷ ಎಂ.ಸಿ. ಶ್ರೀನಿವಾಸ್ ಹಾಗೂ ಭಾರತೀಯ ಭಾಷಾ ಸಮಿತಿ ಅಧ್ಯಕ್ಷ ಚ.ಮೂ. ಕೃಷ್ಣಮೂರ್ತಿ ಸಮಿತಿಯಲ್ಲಿರುವ ಪ್ರಮುಖ ಸದಸ್ಯರಾಗಿದ್ದಾರೆ.
ಪ್ರದೇಶ ಗುಂಪುಗಳ ರಚನೆ:
ಪಠ್ಯಪುಸ್ತಕ ಪರಿಷ್ಕರಣೆ ಸಂಬಂಧ ವಿವಿಧ ಕ್ಷೇತ್ರದ ಪರಿಣತರನ್ನು ಸಮಿತಿಯ ಸದಸ್ಯರನ್ನಾಗಿ ನೇಮಿಸಲಾಗಿದೆ. ಅಲ್ಲದೇ, ಸಮಿತಿಯ ಅಧ್ಯಕ್ಷರು ವಿವಿಧ ಪಠ್ಯಕ್ರಮ ಪ್ರದೇಶ ಗುಂಪುಗಳನ್ನೂ (ಸಿಎಜಿ) ರಚಿಸಿದ್ದಾರೆ. ಹಲವು ವಿಷಯತಜ್ಞರು ಈ ಗುಂಪಿನಲ್ಲಿದ್ದಾರೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಗುಂಪುಗಳು ಪ್ರತಿಯೊಂದು ವಿಷಯಗಳ ಪಠ್ಯಕ್ರಮ ಮತ್ತು ಕಲಿಕಾ ಸಾಮಗ್ರಿಗಳನ್ನು ಅಭಿವೃದ್ಧಿಪಡಿಸಲು ಸಮಿತಿಗೆ ಅಗತ್ಯ ಸಹಾಯ ನೀಡಲಿವೆ. ಅಲ್ಲದೇ, ಇತರೇ ಕ್ಷೇತ್ರಗಳ ಪರಿಣತರಿಂದಲೂ ಸಲಹೆ, ಸಮಾಲೋಚನೆ ಹಾಗೂ ಬೆಂಬಲ ಪಡೆಯುವ ಅಧಿಕಾರವನ್ನು ಸಮಿತಿಗೆ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
'ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನಲ್ಲಿ ಪ್ರಸ್ತಾಪಿಸಿರುವ ಗಣಿತ, ವಿಜ್ಞಾನ, ದೈಹಿಕ ಶಿಕ್ಷಣ, ಸಮಾಜ ವಿಜ್ಞಾನ ಸೇರಿದಂತೆ ಇತರೆ ಪ್ರಧಾನ ವಿಷಯಗಳ ಬಗ್ಗೆ ಕೆಲಸ ನಿರ್ವಹಿಸಲು ಒಟ್ಟು 11 ಸಿಎಜಿಗಳನ್ನು ರಚಿಸಲಾಗಿದೆ' ಎಂದು ಭಾರತೀಯ ಭಾಷಾ ಸಮಿತಿ ಅಧ್ಯಕ್ಷ ಚ.ಮೂ. ಕೃಷ್ಣಶಾಸ್ತ್ರಿ ತಿಳಿಸಿದ್ದಾರೆ.