ಅಯೋಧ್ಯೆ (PTI): ಮುಂದಿನ ವರ್ಷದ ಜನವರಿ ತಿಂಗಳ ಮೂರನೇ ವಾರದಲ್ಲಿ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆಗೆ ಸಂಬಂಧಿಸಿದಂತೆ ಅಯೋಧ್ಯೆಯಲ್ಲಿ ಗುರುವಾರ ಜಿಲ್ಲಾಡಳಿತದಿಂದ ಪ್ರಥಮ ಸಭೆ ನಡೆಯಿತು.
ವಿಭಾಗೀಯ ಆಯುಕ್ತರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪದಾಧಿಕಾರಿಗಳು, ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.
'ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಲಿದ್ದಾರೆ. ಒಂದು ಲಕ್ಷಕ್ಕೂ ಹೆಚ್ಚು ಜನರು ಸೇರುವ ನಿರೀಕ್ಷೆಯಿದೆ. ಹಾಗಾಗಿ ವಾಹನಗಳ ನಿಲುಗಡೆ, ಆಹಾರ ಪೂರೈಕೆ ಹಾಗೂ ಸ್ವಚ್ಛತೆಗೆ ಸಂಬಂಧಿಸಿದಂತೆ ಸಭೆಯಲ್ಲಿ ಚರ್ಚಿಸಲಾಯಿತು' ಎಂದು ಜಿಲ್ಲಾಧಿಕಾರಿ ನಿತೀಶ್ ಕುಮಾರ್ ತಿಳಿಸಿದ್ದಾರೆ.
'ಮೋದಿ ಅವರಿಗೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದೆ. ಅಲ್ಲದೇ, ದೇಶದ ವಿವಿಧ ರಾಜ್ಯಗಳ ಗಣ್ಯರು, ಮಠಾಧೀಶರಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಆಮಂತ್ರಣ ನೀಡಲಾಗುತ್ತದೆ' ಎಂದು ಟ್ರಸ್ಟ್‌ನ ಅಧಿಕಾರಿಗಳು ತಿಳಿಸಿದ್ದಾರೆ.