ಜೈಪುರ: ಲಂಚ ಪಡೆದ ಪ್ರಕರಣದಲ್ಲಿ ಪತಿಯನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬಂಧಿಸಿರುವ ಬೆನ್ನಲ್ಲೇ ಜೈಪುರ ಹೆರಿಟೇಜ್ ಮಹಾನಗರ ಪಾಲಿಕೆಯ ಮೇಯರ್ ಮುನೇಶ್ ಗುರ್ಜರ್ ಅವರನ್ನು ಅಮಾನತು ಮಾಡಲಾಗಿದೆ.
ಜೈಪುರ: ಲಂಚ ಪಡೆದ ಪ್ರಕರಣದಲ್ಲಿ ಪತಿಯನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬಂಧಿಸಿರುವ ಬೆನ್ನಲ್ಲೇ ಜೈಪುರ ಹೆರಿಟೇಜ್ ಮಹಾನಗರ ಪಾಲಿಕೆಯ ಮೇಯರ್ ಮುನೇಶ್ ಗುರ್ಜರ್ ಅವರನ್ನು ಅಮಾನತು ಮಾಡಲಾಗಿದೆ.
ಜಮೀನು ಗುತ್ತಿಗೆಗೆ ನೀಡುವುದಕ್ಕೆ ಸಂಬಂಧಿಸಿದ ದಾಖಲೆಗಳನ್ನು ನೀಡಲು ₹2 ಲಕ್ಷ ಲಂಚ ಪಡೆದ ಆರೋಪದಲ್ಲಿ ಮುನೇಶ್ ಅವರ ಪತಿ ಸುಶೀಲ್ ಗುರ್ಜರ್ ಹಾಗೂ ಮಧ್ಯವರ್ತಿಗಳಾದ ನಾರಾಯಣ ಸಿಂಗ್ ಮತ್ತು ಅನಿಲ್ ದುಬೆ ಎಂಬವರನ್ನು ಎಸಿಬಿ ಶುಕ್ರವಾರ ಬಂಧಿಸಿತ್ತು.
ಬಳಿಕ ಗುರ್ಜರ್ ಅವರ ಮನೆಯಲ್ಲಿ ಶೋಧ ಕಾರ್ಯ ನಡೆಸಿದ್ದ ಎಸಿಬಿ ₹40 ಲಕ್ಷ ನಗದು, ದಾಖಲೆಗಳನ್ನು ವಶಪಡಿಸಿಕೊಂಡಿತ್ತು. ನಾರಾಯಣ ಸಿಂಗ್ ಮನೆಯಲ್ಲಿ ₹8 ಲಕ್ಷ ನಗದು ಪತ್ತೆಯಾಗಿತ್ತು.
'ಈ ಪ್ರಕರಣದಲ್ಲಿ ಮುನೇಶ್ ಅವರು ಭಾಗಿಯಾಗಿರುವ ಸಾಧ್ಯತೆ ಇರುವುದಾಗಿ ಶಂಕಿಸಲಾಗಿದೆ. ಈ ಕಾರಣಕ್ಕೆ ತನಿಖೆ ಪೂರ್ಣಗೊಳ್ಳುವವರೆಗೆ ಅವರನ್ನು ಮೇಯರ್ ಸ್ಥಾನದಿಂದ ಅಮಾನತುಗೊಳಿಸಲಾಗಿದೆ' ಎಂದು ಸ್ಥಳೀಯಾಡಳಿತ ಇಲಾಖೆಯ ನಿರ್ದೇಶಕ ಹೃದೇಶ್ ಕುಮಾರ್ ಶರ್ಮಾ ಹೇಳಿದ್ದಾರೆ.
'ಇದು ನನ್ನ ಮತ್ತು ಕುಟುಂಬದ ವಿರುದ್ಧ ನಡೆದ ರಾಜಕೀಯ ಷಡ್ಯಂತ್ರ. ಷಡ್ಯಂತ್ರ ನಡೆಸಿರುವವರು ಶೀಘ್ರ ಸಿಕ್ಕಿಬೀಳಲಿದ್ದಾರೆ. ನನಗೆ ನ್ಯಾಯಾಂಗದ ಮೇಲೆ ಸಂಪೂರ್ಣ ವಿಶ್ವಾಸ ಇದೆ' ಎಂದು ಮುನೇಶ್ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
'ಸರ್ಕಾರದ ಈ ನಿರ್ಧಾರವು ಸ್ವಾಗತಾರ್ಹ ಯಾರೇ ಆದರೂ ಭಷ್ಟಾಚಾರ ನಡೆಸಿದರೆ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು' ಎಂದು ರಾಜಸ್ಥಾನ ಸಚಿವ ಪ್ರತಾಪ್ ಸಿಂಗ್ ಖಚರಿಯಾವಾಸ್ ಹೇಳಿದ್ದಾರೆ.
'ಮೇಯರ್ ಮತ್ತು ಅವರ ಪತಿ ಪಕ್ಷದ ಪ್ರತಿಷ್ಠೆ ಬಗ್ಗೆ ಚಿಂತಿಸಿಲ್ಲ' ಎಂದಿದ್ದಾರೆ.