ಗ್ರಾಚ್ಯುಟಿ ಎನ್ನುವುದು ಉದ್ಯೋಗಿಯ ದೀರ್ಘಾವಧಿಯ ಸೇವೆಗಳಿಗೆ ಉದ್ಯೋಗದಾತರು ನೀಡುವ ಸ್ಥಿರ ಸಂಭಾವನೆಯಾಗಿದೆ.
ಗ್ರಾಚ್ಯುಟಿ ಪಡೆಯುವ ಬಗ್ಗೆ ಅನೇಕರಿಗೆ ಸರಿಯಾದ ತಿಳುವಳಿಕೆ ಇಲ್ಲ. ಉದ್ಯೋಗಿಗಳು ಮತ್ತು ಉದ್ಯೋಗದಾತರ ನಡುವೆ ಅದರ ಅರ್ಹತೆಗಳು ಮತ್ತು ಮಾನದಂಡಗಳ ಬಗ್ಗೆ ಅನೇಕ ತಪ್ಪುಗ್ರಹಿಕೆಗಳು ಸಂಭವಿಸುತ್ತವೆ. ಗ್ರಾಚ್ಯುಟಿ ಎಂದರೇನು ಎಂಬುದನ್ನು ಅರ್ಥಮಾಡಿಕೊಳ್ಳಲು, ಒಬ್ಬರು ಮೊದಲು ಗ್ರಾಚ್ಯುಟಿ ಕಾಯ್ದೆ, 1972 ರ ಬಗ್ಗೆ ತಿಳಿದುಕೊಳ್ಳಬೇಕು.
ಸಾಮಾನ್ಯವಾಗಿ ಕನಿಷ್ಠ ಐದು ವರ್ಷಗಳ ಕಾಲ ಕಂಪನಿಯಲ್ಲಿ ಸೇವೆ ಸಲ್ಲಿಸಿದ ಉದ್ಯೋಗಿಗಳಿಗೆ ಗ್ರಾಚ್ಯುಟಿ ನೀಡಲಾಗುತ್ತದೆ. ಆದರೆ ಕಾಯಿದೆಯು ಉದ್ಯೋಗಿಯ ಸೇವಾ ಅವಧಿಯು 4.8 ವರ್ಷ ಅಥವಾ ಅದಕ್ಕಿಂತ ಕಡಿಮೆ ಇದ್ದರೂ ಸಹ ಗ್ರಾಚ್ಯುಟಿ ಲಭ್ಯತೆ ಒದಗಿಸುತ್ತದೆ. ಗ್ರಾಚ್ಯುಟಿ ಪಾವತಿ ಕಾಯ್ದೆ, 1972 ರ ಸೆಕ್ಷನ್ 4 ರ ಪ್ರಕಾರ ಗ್ರಾಚ್ಯುಟಿ ಪಾವತಿಸಲು 10 ಅಥವಾ ಅದಕ್ಕಿಂತ ಹೆಚ್ಚಿನ ಉದ್ಯೋಗಿಗಳನ್ನು ಹೊಂದಿರುವ ಸಂಸ್ಥೆ ಆಗಿರಬೇಕು. ಇದನ್ನು ಉದ್ಯೋಗದಾತರ ಕಾನೂನು ಬಾಧ್ಯತೆ ಎಂದು ಪರಿಗಣಿಸಲಾಗುತ್ತದೆ.
ಗ್ರಾಚ್ಯುಟಿ ಕಾಯ್ದೆಯಲ್ಲಿ ನಮೂದಿಸಿರುವಂತೆ ಮೂರು ಷರತ್ತುಗಳಿಗೆ ಒಳಪಟ್ಟಿರುತ್ತದೆ.ಗ್ರಾಚ್ಯುಟಿ ಪಡೆಯಲು ಯಾವುದೇ ಕೆಲಸ ಮಾಡುವ ಉದ್ಯೋಗಿ ರಾಜೀನಾಮೆ ನೀಡುವ ಮೊದಲು ಕನಿಷ್ಠ ಐದು ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿರಬೇಕು. ಪರ್ಯಾಯವಾಗಿ, ಕಂಪನಿಯು ಐದು ದಿನಗಳ ಕೆಲಸದ ವಾರದ ವೇಳಾಪಟ್ಟಿಯನ್ನು ನಿರ್ವಹಿಸಿದರೆ, ಗ್ರಾಚ್ಯುಟಿಯು 4 ವರ್ಷಗಳು ಮತ್ತು 190 ದಿನಗಳ ಸೇವಾ ಅವಧಿಯ ನಂತರ ಲಭ್ಯವಿರುತ್ತದೆ. ಈಗ ಕಂಪನಿಯು ಆರು ದಿನಗಳ ವಾರದ ವೇಳಾಪಟ್ಟಿಯನ್ನು ಅನುಸರಿಸುತ್ತಿದ್ದರೆ ಮತ್ತು ನಾಲ್ಕು ವರ್ಷಗಳು ಮತ್ತು 240 ದಿನಗಳ ಸೇವೆಯನ್ನು ಪೂರ್ಣಗೊಳಿಸಿದರೆ ಗ್ರಾಚ್ಯುಟಿಯನ್ನು ಕ್ಲೈಮ್ ಮಾಡಬಹುದು.
ರಾಜೀನಾಮೆಯ ಹೊರತಾಗಿ ಇತರ ಕೆಲವು ಸಂದರ್ಭಗಳಲ್ಲಿ ಸಹ ಗ್ರಾಚ್ಯುಟಿ ಲಭ್ಯವಿದೆ. ನೌಕರನ ಸಾವು, ಅಪಘಾತ, ಅನಾರೋಗ್ಯ ಮತ್ತು ನಿವೃತ್ತಿಯ ಸಂದರ್ಭಗಳಲ್ಲಿ ಸಹ ಗ್ರಾಚ್ಯುಟಿಯನ್ನು ಕ್ಲೈಮ್ ಮಾಡಬಹುದು. ಈ ಸಂದರ್ಭಗಳಲ್ಲಿ ಐದು ವರ್ಷಗಳ ಮಿತಿ ಅನ್ವಯಿಸುವುದಿಲ್ಲ. ಆದರೆ ಇಂಟರ್ನಿಗಳು ಮತ್ತು ತಾತ್ಕಾಲಿಕ ಉದ್ಯೋಗಿಗಳು ಗ್ರಾಚ್ಯುಟಿ ಪ್ರಯೋಜನಗಳಿಗೆ ಅರ್ಹರಲ್ಲ.