ವಾಷಿಂಗ್ಟನ್: 2020ರ ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶವನ್ನು ತಿರುಚಲು ಯತ್ನಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶುಕ್ರವಾರ ಜಾರ್ಜಿಯಾದ ಫುಲ್ಟನ್ ಕೌಂಟಿ ಜೈಲಿಗೆ ಶರಣಾದರು. ಬಳಿಕ ಬಾಂಡ್ ಆಧಾರದ ಮೇಲೆ ಅವರನ್ನು ಬಿಡುಗಡೆ ಮಾಡಲಾಗಿದೆ.
ವಾಷಿಂಗ್ಟನ್: 2020ರ ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶವನ್ನು ತಿರುಚಲು ಯತ್ನಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶುಕ್ರವಾರ ಜಾರ್ಜಿಯಾದ ಫುಲ್ಟನ್ ಕೌಂಟಿ ಜೈಲಿಗೆ ಶರಣಾದರು. ಬಳಿಕ ಬಾಂಡ್ ಆಧಾರದ ಮೇಲೆ ಅವರನ್ನು ಬಿಡುಗಡೆ ಮಾಡಲಾಗಿದೆ.
ಅಮೆರಿಕದ ರಾಜಕೀಯ ಇತಿಹಾಸದಲ್ಲಿಯೇ ಮಾಜಿ ಅಧ್ಯಕ್ಷರೊಬ್ಬರು ಚುನಾವಣಾ ಅಕ್ರಮ ಆರೋಪದ ಮೇಲೆ ಜೈಲು ಸೇರಿದ ಮೊದಲ ನಿದರ್ಶನ ಇದಾಗಿದೆ.
77 ವರ್ಷದ ಟ್ರಂಪ್ ಅವರನ್ನು 22 ನಿಮಿಷಗಳ ಕಾಲ ಜೈಲಿನಲ್ಲಿ ಇಡಲಾಗಿತ್ತು. ಜಾರ್ಜಿಯಾ ರಾಜ್ಯದಲ್ಲಿನ ಫಲಿತಾಂಶವನ್ನು ಬುಡಮೇಲು ಮಾಡಲು ಪಿತೂರಿ ನಡೆಸಿದ ಆರೋಪ ಅವರ ಮೇಲಿದೆ.
ಟ್ರಂಪ್ ಪರ ವಕೀಲರು ನ್ಯಾಯಾಲಯದಲ್ಲಿ ಎರಡು ಲಕ್ಷ ಮೊತ್ತದ ಅಮೆರಿಕನ್ ಡಾಲರ್ ಬಾಂಡ್ ಸಲ್ಲಿಸಿದ ಬಳಿಕ ವಿಚಾರಣೆಯನ್ನು ಕಾಯ್ದಿರಿಸಿ ಬಿಡುಗಡೆ ಮಾಡಲಾಗಿದೆ. ಜೈಲಿನ ದಾಖಲೆಗಾಗಿ ಅಲ್ಲಿನ ಅಧಿಕಾರಿಗಳು ಮಾಜಿ ಅಧ್ಯಕ್ಷರ ಮಗ್ ಶಾಟ್ ಫೋಟೊವನ್ನು (ಭುಜದ ಮೇಲಿನ ಅರ್ಧ ಭಾವಚಿತ್ರ) ತೆಗೆದುಕೊಂಡರು. ಬಳಿಕ ಅವರು ಫೋಟೊವನ್ನು ಬಿಡುಗಡೆಗೊಳಿಸಿದ್ದು, ಇದು ಕೆಲವೇ ಕ್ಷಣಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.
ಟ್ರಂಪ್ 6.3 ಅಡಿ ಎತ್ತರವಿದ್ದು, 97 ಕೆ.ಜಿ ತೂಕ ಹೊಂದಿದ್ದಾರೆ. ಹೊಂಬಣ್ಣ ಅಥವಾ ಸ್ಟ್ರಾಬೆರಿ ಬಣ್ಣದ ಕೂದಲು, ನೀಲಿ ಕಣ್ಣುಗಳಿವೆ ಎಂದು ಜೈಲಿನ ಡೈರಿಯಲ್ಲಿ ಅವರ ಸ್ವವಿವರವನ್ನು ನಮೂದಿಸಲಾಗಿದೆ. ಅವರಿಗೆ ಕೈದಿ ಸಂಖ್ಯೆ ಪಿ01135809 ನೀಡಲಾಗಿತ್ತು.
ಟ್ರಂಪ್ ಹೊರತಾಗಿ ಅಮೆರಿಕದ ಈ ಹಿಂದಿನ ಯಾವುದೇ ಅಧ್ಯಕ್ಷರು ಕ್ರಿಮಿನಲ್ ಅಪರಾಧ ಎದುರಿಸಿಲ್ಲ. ಒಂದು ಬಾರಿ ಅಧ್ಯಕ್ಷರಾಗಿ ಅಧಿಕಾರ ಅವಧಿ ಪೂರ್ಣಗೊಳಿಸಿರುವ ಅವರ ಮೇಲೆ ನಾಲ್ಕು ಆರೋಪ ಪಟ್ಟಿಗಳು ಸಲ್ಲಿಕೆಯಾಗಿವೆ.
'ನಾನು ಯಾವುದೇ ತಪ್ಪು ಎಸಗಿಲ್ಲ. ಅದು ಎಲ್ಲರಿಗೂ ಗೊತ್ತಿದೆ' ಎಂದು ಜೈಲಿನಿಂದ ಬಿಡುಗಡೆಯಾದ ಬಳಿಕ ಸುದ್ದಿಗಾರರ ಪ್ರಶ್ನೆಗಳಿಗೆ ಅವರು ಪ್ರತಿಕ್ರಿಯಿಸಿದರು.
ಮುಂದಿನ ವರ್ಷ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಗೆ ರಿಪಬ್ಲಿಕನ್ ಪಕ್ಷದಿಂದ ಅವರು ಪ್ರಬಲ ಆಕಾಂಕ್ಷಿಯೂ ಆಗಿದ್ದಾರೆ.