ಬೆಂಗಳೂರು: ಚಂದ್ರನ ದಕ್ಷಿಣ ಧ್ರುವದ ಮೇಲ್ಮೈನಲ್ಲಿ ಗಂಧಕ ಇರುವುದನ್ನು ಚಂದ್ರಯಾನ-3ರ ರೋವರ್ (ಪ್ರಜ್ಞಾನ್) ಪತ್ತೆ ಮಾಡಿದೆ.
ಅಲ್ಲದೇ, ನಿರೀಕ್ಷೆಯಂತೆ ಅಲ್ಯುಮಿನಿಯಂ(ಎಎಲ್), ಕ್ಯಾಲ್ಷಿಯಂ,ಕಬ್ಬಿಣ, ಕ್ರೋಮಿಯಂ, ಟೈಟೆನಿಯಂ, ಮ್ಯಾಂಗನೀಸ್, ಸಿಲಿಕಾನ್ ಮತ್ತು ಆಮ್ಲಜನಕ ಧಾತುಗಳು ಪತ್ತೆಯಾಗಿವೆ.
ಪ್ರಜ್ಞಾನ್‌ನಲ್ಲಿರುವ ಲಿಬ್ಸ್ ಉಪಕರಣವು ಈ ಧಾತುಗಳನ್ನು ಪತ್ತೆ ಮಾಡಿದ್ದು, ಚಂದ್ರನ ದಕ್ಷಿಣ ಧ್ರುವದಲ್ಲಿ ರೋವರ್ ಇಳಿದು ಬುಧವಾರಕ್ಕೆ ಒಂದು ವಾರ ತುಂಬಲಿದೆ. ಇನ್ನು ಏಳು ದಿನಗಳ ಕಾಲ ಪ್ರಯೋಗ ಮುಂದುವರಿಸಲಿದೆ. ಅಂದರೆ ಸೆ. 5 ರವೇಳೆಗೆ ಚಂದ್ರನಲ್ಲಿ ಕತ್ತಲು ಆವರಿಸಲಿದೆ. ಅಲ್ಲಿ ಇನ್ನು ಬೆಳಕು ಕಾಣಲು ಮುಂದಿನ 14 ದಿನಗಳು ಕಾಯಬೇಕು. ಆ ಬಳಿಕ ಮತ್ತೆ ಲ್ಯಾಂಡರ್ ಮತ್ತು ರೋವರ್‌ಗಳಿಗೆ ಮರು ಜೀವ ನೀಡಲು ಸಾಧ್ಯವೇ ಎಂಬುದನ್ನು ಇಸ್ರೊ ಪ್ರಯತ್ನ ನಡೆಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಲಿಬ್ಸ್ (ಲೇಸರ್ ಇಂಡ್ಯೂಸ್ಡ್ ಬ್ರೇಕ್‌ಡೌನ್ ಸ್ಪೆಕ್ಟ್ರೊಸ್ಕೋಪ್) ಉಪಕರಣವನ್ನು ಬೆಂಗಳೂರಿನ ಎಲೆಕ್ಟ್ರೊ- ಆಪ್ಟಿಕ್ಸ್ ಸಿಸ್ಟಮ್ ಪ್ರಯೋಗಾಲಯ ಅಭಿವೃದ್ಧಿಪಡಿಸಿತ್ತು.