ಇಂಫಾಲ್: ವಿಧಾನಸಭೆಯ ಒಂದು ದಿನದ ಅಧಿವೇಶನವನ್ನು ಐದು ದಿನಗಳವರೆಗೆ ವಿಸ್ತರಿಸಬೇಕೆಂದು ಒತ್ತಾಯಿಸಿ ಕಾಂಗ್ರೆಸ್ ಶಾಸಕರು ಸದನದಲ್ಲಿ ಪ್ರತಿಭಟನೆ ನಡೆಸಿದ್ದು, ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.
ಇಂಫಾಲ್: ವಿಧಾನಸಭೆಯ ಒಂದು ದಿನದ ಅಧಿವೇಶನವನ್ನು ಐದು ದಿನಗಳವರೆಗೆ ವಿಸ್ತರಿಸಬೇಕೆಂದು ಒತ್ತಾಯಿಸಿ ಕಾಂಗ್ರೆಸ್ ಶಾಸಕರು ಸದನದಲ್ಲಿ ಪ್ರತಿಭಟನೆ ನಡೆಸಿದ್ದು, ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.
ಅಧಿವೇಶನ ಪ್ರಾರಂಭಕ್ಕೂ ಮುನ್ನ ಜನಾಂಗೀಯ ಹತ್ಯೆಯಲ್ಲಿ ಪ್ರಾಣ ಕಳೆದುಕೊಂಡವರಿಗೆ ಎರಡು ನಿಮಿಷಗಳ ಮೌನಾಚರಣೆ ಮಾಡಲಾಯಿತು.
ರಾಜ್ಯದಲ್ಲಿ ಕೋಮು ಸೌಹಾರ್ದತೆ ಪುನರ್ ಪ್ರತಿಷ್ಠಾಪಿಸಲು ಭಿನ್ನಾಭಿಪ್ರಾಯಗಳನ್ನು ತೊಡೆದು ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕೆಂದು ಸದನದಲ್ಲಿ ನಿರ್ಣಯಿಸಲಾಯಿತು. ಅಲ್ಲದೇ ಚಂದ್ರಯಾನ-3 ಯಶಸ್ವಿಗೊಳಿಸಿದ ವಿಜ್ಞಾನಿಗಳನ್ನು ಪ್ರಶಂಸಿಸಲಾಯಿತು.
ಇದಾದ ಬೆನ್ನಲ್ಲೇ 'ಅಪಹಾಸ್ಯ ನಿಲ್ಲಿಸಿ ಪ್ರಜಾಪ್ರಭುತ್ವ ಉಳಿಸಿ' ಎಂದು ಘೋಷಣೆ ಕೂಗಿ ಪ್ರತಿಭಟನೆ ಆರಂಭಿಸಿದ ವಿರೋಧ ಪಕ್ಷ ಕಾಂಗ್ರೆಸ್‌ನ ಶಾಸಕರು, 'ಒಂದು ದಿನದ ಅಧಿವೇಶನದಲ್ಲಿ ಮಣಿಪುರದ ಪರಿಸ್ಥಿತಿಯನ್ನು ಅವಲೋಕಿಸಲು ಸಾಧ್ಯವಿಲ್ಲ. ಅಧಿವೇಶವನ್ನು ಐದು ದಿನಗಳವರೆಗೆ ಮುಂದುವರಿಸಬೇಕು' ಎಂದು ಒತ್ತಾಯಿಸಿದರು.
ಶಾಂತಿಯುತವಾಗಿ ವರ್ತಿಸುವಂತೆ ವಿರೋಧ ಪಕ್ಷದ ನಾಯಕರಿಗೆ ಸ್ಪೀಕರ್ ಸತ್ಯಬ್ರತ ಸಿಂಗ್ ಸೂಚಿಸಿದರು. ಅದಾಗ್ಯೂ ಗದ್ದಲ ಮುಂದುವರಿದಿದ್ದರಿಂದ ಕಲಾಪವನ್ನು 30 ನಿಮಿಷಗಳ ಕಾಲ ಮುಂದೂಡಲಾಯಿತು. ಎರಡನೇ ಬಾರಿ ಕಲಾಪ ಆರಂಭವಾದಾಗಲೂ ಪರಿಸ್ಥಿತಿ ಹಾಗೆ ಮುಂದುವರಿದಿದ್ದು, ಗದ್ದಲದ ನಡುವೆ ಕಲಾಪ ನಡೆಸಲು ಸಾಧ್ಯವಿಲ್ಲ ಎಂದು ತಿಳಿಸಿದ ಸ್ಪೀಕರ್ ಅನಿರ್ದಿಷ್ಟಾವಧಿಗೆ ಮುಂದೂಡಿದರು.
ಏತನ್ಮಧ್ಯೆ ಎಲ್ಲಾ 10 ಕುಕಿ ಶಾಸಕರು ಸದನಕ್ಕೆ ಗೈರಾಗಿದ್ದರು.