ಕೋಲಘಾಟ್ (PTI): 'ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯವನ್ನು ಧ್ವನಿ ಮತಕ್ಕೆ ಹಾಕುವ ಮೊದಲೇ 'ಇಂಡಿಯಾ' ಮೈತ್ರಿಕೂಟದ ಸದಸ್ಯರು ಕಲಾಪದಿಂದ ಓಡಿಹೋದರು. ಸರ್ಕಾರವು ಈ ನಿರ್ಣಯವನ್ನಷ್ಟೇ ಸೋಲಿಸಿಲ್ಲ. ಆ ಮೂಲಕ ದೇಶದಾದ್ಯಂತ ನಕಾರಾತ್ಮಕತೆ ಹರಡುವಿಕೆಯನ್ನೂ ಹಿಮ್ಮೆಟ್ಟಿಸಿದೆ' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಶನಿವಾರ ನಡೆದ ಪಂಚಾಯತ್ ರಾಜ್ ಪರಿಷತ್‌ನ ಸಭೆಯನ್ನು ಉದ್ದೇಶಿಸಿ ವರ್ಚುವಲ್ ಆಗಿ ಅವರು ಮಾತನಾಡಿದರು.
'ದೇಶದಲ್ಲಿ ನಕಾರಾತ್ಮಕತೆ ಹರಡು ವುದೇ 'ಇಂಡಿಯಾ' ಕೆಲಸ. ಎರಡು ದಿನಗಳ ಹಿಂದೆ ಸಂಸತ್‌ನಲ್ಲಿ ಅವರು ಮಂಡಿಸಿದ್ದ ಅವಿಶ್ವಾಸ ನಿರ್ಣಯವನ್ನೂ ಸೋಲಿಸಿದ್ದೇವೆ. ಆದರೆ, ಧ್ವನಿ ಮತದ ಪ್ರಕ್ರಿಯೆಯಲ್ಲಿ ತನ್ನ ಹುಳುಕು ಗಳು ಬಹಿರಂಗವಾಗುತ್ತವೆ ಎಂದು ವಿರೋಧಪಕ್ಷಗಳು ಪಾಲ್ಗೊಳ್ಳಲಿಲ್ಲ' ಎಂದು ಟೀಕಿಸಿದರು.
'ವಿರೋಧ ಪಕ್ಷಗಳಿಗೆ ಮಣಿಪುರ ಹಿಂಸಾಚಾರದ ಬಗ್ಗೆ ಚರ್ಚಿಸಲು ಮನಸ್ಸಿಲ್ಲ. ಯಾವುದೇ ವಿಷಯದ ಬಗ್ಗೆಯೂ ಗಹನವಾದ ಚರ್ಚೆ ಮಾಡುವುದಿಲ್ಲ. ಎಲ್ಲವನ್ನೂ
ರಾಜಕೀಯಗೊಳಿಸುವುದರಲ್ಲಿ ಮುಳುಗಿವೆ'ಎಂದರು.
ದೇಶದಲ್ಲಿ ಕಾಂಗ್ರೆಸ್ 'ಗರೀಬಿ ಹಠಾವೋ' ಯೋಜನೆ ಘೋಷಿಸಿತು. ಆದರೆ, ವಾಸ್ತವದಲ್ಲಿ ಬಡತನವನ್ನು ನಿರ್ಮೂಲನೆ ಮಾಡಲಿಲ್ಲ.
ರಾಷ್ಟ್ರದಲ್ಲಿನ ಬಡವರ ಜೀವನಮಟ್ಟದ ಸುಧಾರಣೆಗೂ ಯಾವುದೇ ಕ್ರಮ
ವಹಿಸಲಿಲ್ಲ ಎಂದು ಅವರು ಆರೋಪಿಸಿದರು.
'ಬಡವರ ಶ್ರೇಯೋಭಿವೃದ್ಧಿಯೇ ಬಿಜೆಪಿಯ ಧ್ಯೇಯ. ಈ ನಿಟ್ಟಿನಲ್ಲಿ ದಿಟ್ಟಹೆಜ್ಜೆ ಸರ್ಕಾರ ಇಟ್ಟಿದೆ' ಎಂದರು.
'ಟಿಎಂಸಿ ಬೆದರಿಕೆ ತಂತ್ರ ಫಲಿಸಲಿಲ್ಲ'
'ಪಶ್ಚಿಮ ಬಂಗಾಳದಲ್ಲಿ ನಡೆದ ಪಂಚಾಯತ್ ಚುನಾವಣೆಯಲ್ಲಿ ಪ್ರತಿಪಕ್ಷಕ್ಕೆ ಭಯ ಹುಟ್ಟಿಸಲು ಆಡಳಿತಾರೂಢ ತೃಣಮೂಲ ಕಾಂಗ್ರೆಸ್(ಟಿಎಂಸಿ) 'ಭಯ ಹುಟ್ಟಿಸುವ ಹಾಗೂ ಬೆದರಿಕೆ'ಯ ತಂತ್ರ ಅನುಸರಿಸಿತು' ಎಂದು ಪ್ರಧಾನಿ ಮೋದಿ ಆಪಾದಿಸಿದರು.
ಆದರೆ, ಮತದಾರರು ಬಿಜೆಪಿ ಅಭ್ಯರ್ಥಿಗಳಿಗೆ ಆಶೀರ್ವದಿಸಿದರು. ಇದರಿಂದ ಭಯದ ವಾತಾವರಣ ನಿರ್ಮಿಸುವ ಆಳ್ವಿಕೆಯ ಮೇಲಿನ ಟಿಎಂಸಿ ಹಿಡಿತವೂ ತಪ್ಪಿತು ಎಂದು ಹೇಳಿದರು.
'ಬಂಗಾಳಿ ಜನರ ಪ್ರೀತಿಯು ಗೆಲುವನ್ನು ದಕ್ಕಿಸಿಕೊಟ್ಟಿತು. ಚುನಾವಣೆಯಲ್ಲಿ ಗೆದ್ದ ಬಿಜೆಪಿ ಅಭ್ಯರ್ಥಿಗಳು ವಿಜಯೋತ್ಸವ ಆಚರಣೆಗೆ ಮುಂದಾಗಲಿಲ್ಲ. ಮೆರವಣಿಗೆ ಮುಂದಾದ ಕೆಲವರ ಮೇಲೆ ದಾಳಿಯೂ ನಡೆಯಿತು. ಇದೇ ಟಿಎಂಸಿಯ ರಾಜಕೀಯ' ಎಂದು ದೂರಿದರು.
ಮೋದಿ ಹೇಳಿಕೆಗೆ ಮಮತಾ ತಿರುಗೇಟು
: 'ಮಣಿಪುರದಲ್ಲಿ ನಡೆಯುತ್ತಿರುವ ದೌರ್ಜನ್ಯದಲ್ಲಿ ಭಾಗಿಯಾಗಿರುವ ತಪ್ಪಿತಸ್ಥರ ವಿರುದ್ಧ ಕೇಂದ್ರ ಸರ್ಕಾರವು ಕ್ರಮಕೈಗೊಳ್ಳಲು ನಿರ್ಲಕ್ಷ್ಯ ವಹಿಸಿದೆ' ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೂರಿದ್ದಾರೆ.
'ಪಿ.ಎಂ ಕೇರ್ ಫಂಡ್, ರಫೇಲ್ ಖರೀದಿ ಒಪ್ಪಂದ ಹಾಗೂ ನೋಟು ಅಮಾನ್ಯ ಸಂಬಂಧ ಕೇಂದ್ರದ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿಬಂದಿದೆ. ಹಾಗಾಗಿ, ಪ್ರಧಾನಿ ಮೋದಿ ಅವರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಹಕ್ಕಿಲ್ಲ' ಎಂದಿದ್ದಾರೆ.
'ಬಿಜೆಪಿಗೆ ದೇಶದ ಬಡಜನರ ಅಭ್ಯುದಯ ಬೇಕಿಲ್ಲ. ಆದರೂ, ಬಡತನ ನಿರ್ಮೂಲನೆ ಸಂಬಂಧ ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ವಿರೋಧ ಪಕ್ಷಗಳ ಮೇಲೆ ಪ್ರಧಾನಿ ಅವರು ಆರೋಪ ಮಾಡುತ್ತಿದ್ದಾರೆ. ಆ ಮೂಲಕ ದೇಶದ ಜನರನ್ನು ದಿಕ್ಕುತಪ್ಪಿಸುತ್ತಿದ್ದಾರೆ' ಎಂದು ಅವರು ವಿಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ. ಪಂಚಾಯಿತಿ ಚುನಾವಣೆಯಲ್ಲಿ ಅವರಿಂದಲೇ (ಬಿಜೆಪಿ) ರಾಜ್ಯದಲ್ಲಿ 15ರಿಂದ 16 ಮಂದಿಯ ಹತ್ಯೆಯಾಗಿದೆ ಎಂದು ಆರೋಪಿಸಿದ್ದಾರೆ.